ವಿದ್ಯಾರ್ಥಿಗಳಿಗೆ ಪಠ್ಯ ಚಟುವಟಿಕೆ ಜೊತೆಗೆ ಪಠ್ಯೇತರ, ಸಾಂಸ್ಕೃತಿಕ ಚಟುವಟಿಕೆ ಅತ್ಯಂತ ಅವಶ್ಯಕ : ಡಾ.ಎಸ್.ವಿ.ಪಾಟೀಲ್

ಬೀದರ್ : ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಸಹ ಅತ್ಯಂತ ಅವಶ್ಯಕವಾಗಿವೆ ಎಂದು ಬೀದರ್ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ್ ಅವರು ಹೇಳಿದರು.
ಬೀದರ್ ನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಬಾಗಲಕೋಟ್ ನ ತೋಟಗಾರಿಕಾ ಮಹಾವಿದ್ಯಾಲಯದ 18ನೇ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿಗಳ ವಸತಿ ನಿಲಯಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಾರ್ಷಿಕೋತ್ಸವವು ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರತಿಭೆಗಳನ್ನು ಅನಾವರಣಗೊಳಿಸುವ ವೇದಿಕೆಯಾಗಿದ್ದು, ಶೈಕ್ಷಣಿಕ ಸಾಧನೆಗಳೊಂದಿಗೆ ನಾಯಕತ್ವ, ಸಾಮಾಜಿಕ ಜವಾಬ್ದಾರಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಒಂದು ವಿಶೇಷ ಸಾಮರ್ಥ್ಯವಿದೆ. ಅದನ್ನು ಸರಿಯಾದ ರೀತಿಯಲ್ಲಿ ಸದ್ಭಳಕೆ ಮಾಡಿಕೊಂಡು, ತೋಟಗಾರಿಕೆ ಕ್ಷೇತ್ರದಲ್ಲಿ ನವೀನ ತಂತ್ರಜ್ಞಾನಗಳ ಅಳವಡಿಕೆ, ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳ ಮೂಲಕ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಕೊಡುಗೆ ನೀಡಬೇಕು. ವಿದ್ಯಾರ್ಥಿಗಳು ಶಿಸ್ತು, ಸಮರ್ಪಣೆ ಮತ್ತು ಪರಿಶ್ರಮದ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಲಬುರಗಿಯ ಕೃಷಿ ಮಹಾವಿದ್ಯಾಲಯದ ವಿಶ್ರಾಂತ ಡೀನ್ ಡಾ.ಸುರೇಶ್ ಸಿ. ಪಾಟೀಲ್ ಅವರು ಮಾತನಾಡಿ, ವಿದ್ಯಾರ್ಥಿ ಜೀವನವು ವ್ಯಕ್ತಿತ್ವ ನಿರ್ಮಾಣದ ಪ್ರಮುಖ ಹಂತವಾಗಿದ್ದು, ಶಿಕ್ಷಣದ ಜೊತೆಗೆ ಶಿಸ್ತು, ನೈತಿಕ ಮೌಲ್ಯಗಳು ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಕೃಷಿ ಹಾಗೂ ತೋಟಗಾರಿಕೆ ಕ್ಷೇತ್ರವು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನ, ಸಂಶೋಧನೆ ಮತ್ತು ನವೀನ ಆವಿಸ್ಕಾರಗಳನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಕರು ನೀಡಿದ ಜ್ಞಾನವನ್ನು ಉತ್ತಮ ರೀತಿಯಲ್ಲಿ ವಿವೇಕದಿಂದ ಉಪಯೊಗಿಸಿಕೊಂಡು ದಕ್ಷತೆ, ಪ್ರಾಮಾಣಿಕತೆಯಿಂದ ರೈತ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಎಸ್. ವಿ. ಪಾಟೀಲ್, ಪ್ರಾಧ್ಯಾಪಕ ಡಾ. ಮೊಹಮ್ಮದ್ ಫಾರೂಕ್, ನಿಲಯ ಪಾಲಕರಾದ ಆಂಜನೇಯ, ಜಾನವಿ ಡಿ.ಆರ್ ಮತ್ತು ವಸತಿ ನಿಲಯಗಳ ಪದಾಧಿಕಾರಿಗಳು 2025-26 ನೇ ಶೈಕ್ಷಣಿಕ ಸಾಲಿನ ತೋಟಗಾರಿಕೆ ಮಹಾವಿದ್ಯಾಲಯ ಹಾಗೂ ವಸತಿ ನಿಲಯಗಳ ವಾರ್ಷಿಕೋತ್ಸವದ ನಿಮಿತ್ತ ರಚಿಸಲಾದ ʻಸಂಭ್ರಮ-2026ʼ ಎಂಬ ಸ್ಮರಣ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಿದರು. ವಾರ್ಷಿಕೋತ್ಸವ ನಿಮಿತ್ತ ಹಮ್ಮಿಕೊಂಡಿರುವ ವಿವಿಧ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪದಕ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಧ್ಯಾಪಕ ಡಾ. ಶ್ರೀನಿವಾಸ್ ಎನ್, ಸಹ ಪ್ರಾಧ್ಯಾಪಕ ಡಾ. ರಾಜಕುಮಾರ್ ಎಮ್., ವಸತಿ ನಿಲಯ ಸಂಘದ ಪ್ರತಿನಿಧಿಗಳಾದ ಮನೋಜ್ ಪಾಟೀಲ್, ಅಲೋಕ್ ಪಾಟೀಲ್, ಭಗವಂತರಾಯ್, ಹರ್ಷಕುಮಾರ್, ಶ್ರೀವಾತ್ಸವ್, ವಿಜಯಾ, ವಿದ್ಯಾರ್ಥಿನಿಯರ ವಸತಿ ನಿಲಯ ಸಂಘದ ಪ್ರತಿನಿಧಿಗಳಾದ ದಿವ್ಯಾ ಉಪ್ಪೆ, ಕೀರ್ತಿ, ವೈಷ್ಣವಿ, ಸಾನಿಯಾ, ಕವಿತಾ, ಸಂಜನಾ, ಕ್ರೀಡಾ ಮತ್ತು ಸಾಂಸ್ಕೃತಿಕ, ತರಗತಿವಾರು ವರ್ಗ ಪ್ರತಿನಿಧಿಗಳಾದ ಬಸವರಾಜ್ ರೇಷ್ಮೆ, ದೀಪಿಕಾ, ಜಯಶ್ರೀ, ಕು.ದಿವ್ಯಾ, ಕೀರ್ತಿ, ವಿಜಯಲಕ್ಷ್ಮಿಹಾಗೂ ಐಶ್ವರ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪೂಜಾ ಮತ್ತು ಸಂಗಡಿಗರು ಭರತನಾಟ್ಯ ಮಾಡಿದರು. ವೈಷ್ಣವಿ ಸ್ವಾಗತಿಸಿದರು. ಸುಮಯ್ಯಾ ವಂದಿಸಿದರು. ಫಲಕನಾಜ್ ಮತ್ತು ನಿತೀನ್ ನಿರೂಪಿಸಿದರು.






