ಅಂಬೇಡ್ಕರ್ ಭಾರತ ದೇಶದ ಶಕ್ತಿಯಾಗಿದ್ದಾರೆ : ಡಾ.ಎಚ್.ಸಿ. ಮಹದೇವಪ್ಪ

ಬೀದರ್ : ಡಾ.ಬಿಆರ್ ಅಂಬೇಡ್ಕರ್ ಅವರು ಭಾರತ ದೇಶದ ಶಕ್ತಿಯಾಗಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್ ಸಿ ಮಹದೇವಪ್ಪ ಹೇಳಿದರು.
ಹುಮನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಅವರ ನೂತನ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಸಚಿವ ಡಾ.ಎಚ್ ಸಿ ಮಹದೇವಪ್ಪ, ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ಕನಸನ್ನು ನಾವು ನನಸು ಮಾಡಿದ್ದೇವೆ. ಬಸವಣ್ಣನವರ ದಾಸೋಹ ಕಲ್ಪನೆಯನ್ನು ನಮ್ಮ ಸರಕಾರ ಈಡೇರಿಸುತ್ತಿದೆ. ಬಸವಣ್ಣವರನ್ನು ಸಾಂಸ್ಕೃತಿಕ ನಾಯಕ ಎಂದು ನಮ್ಮ ಸರಕಾರ ಘೋಷಣೆ ಮಾಡಿ ಗೌರವಿಸಿದೆ ಎಂದು ತಿಳಿಸಿದರು.
ನಮ್ಮ ಸರಕಾರ ಬಂದ ನಂತರ ಸಂವಿಧಾನದ ಜಾಗೃತಿ ಕಾರ್ಯಕ್ರಮವನ್ನು ಹಳ್ಳಿ ಹಳ್ಳಿಗಳಲ್ಲಿ ಹಮ್ಮಿಕೊಂಡು ಜಾಗೃತಿ ಮೂಡಿಸುವ ಮೂಲಕ ಸಂವಿಧಾನದ ರಕ್ಷಣೆಗೆ ಬದ್ಧರಾಗಿದ್ದೇವೆ. ಈ ನಮ್ಮ ಜಾಗೃತಿಯ ಕೆಲಸ ದೇಶಕ್ಕೆ ಮಾದರಿಯಾಗಿದೆ ಎಂದರು.
ಅಂಬೇಡ್ಕರ್ ಅವರು ಬರೆದ ಸಂವಿಧಾನ ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕಗಳನ್ನು ಕಾಪಾಡುತ್ತಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಿಂದೂ ಧರ್ಮ ಬಿಟ್ಟು ಬೌದ್ಧ ಧರ್ಮ ಸೇರ್ಪಡೆಯಾಗಲು ಹಿಂದೂ ಧರ್ಮ ಸುಧಾರಣೆಯಾಗದಿರುವುದೆ ಕಾರಣವಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬರು ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಅನುಸರಿಸಿದಾಗ ಅಂಬೇಡ್ಕರ್ ಅವರ ಕನಸು ನನಸಾಗುತ್ತದೆ. ಹಾಗಾಗಿ ಎಲ್ಲರೂ ಅಂಬೇಡ್ಕರ್ ಅವರ ತತ್ವ ಸಿದ್ಧಾಂತವನ್ನು ಅನುಸರಿಸಬೇಕು ಎಂದು ಕರೆ ಕೊಟ್ಟರು.
ಈ ಸಂದರ್ಭದಲ್ಲಿ ಭಂತೆ ಜ್ಞಾನಸಾಗರ್, ಮಾಜಿ ಸಚಿವ ರಾಜಶೇಖರ್ ಪಾಟೀಲ್, ಶಾಸಕ ಸಿದ್ದು ಪಾಟೀಲ್, ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ್ ಪಾಟೀಲ್, ಭೀಮರಾವ್ ಪಾಟೀಲ್, ಮಾಲಾ ಬಿ. ನಾರಾಯಣರಾವ್, ಅರವಿಂದಕುಮಾರ್ ಅರಳಿ, ಡಿ. ಜೆ. ಸಾಗರ್ ಹಾಗೂ ಅಂಕೋಶ್ ಗೋಖಲೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







