2028ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ ಈಶ್ವರ್ ಖಂಡ್ರೆಗೆ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲಿ: ಶಿವರಾಜ್ ಹಾಸನಕರ್

ಬೀದರ್ : 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ ಜೂ.3 ರಂದು ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿರುವ ಸರ್ಕಾರದಲ್ಲಿ ಈಶ್ವರ್ ಖಂಡ್ರೆ ಅವರಿಗೆ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಿವರಾಜ್ ಹಾಸನಕರ್ ಅವರು ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈಶ್ವರ್ ಖಂಡ್ರೆ ಅವರು ಕಾಂಗ್ರೆಸ್ ನ ಧೀಮಂತ ನಾಯಕರಾಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕಾಗಿ ಅವರು ಅಪಾರವಾದ ಕೊಡುಗೆ ನೀಡಿದ್ದು, ರಾಜ್ಯದಾದ್ಯಂತ ತನ್ನದೇಯಾದ ಛಾಪು ಮೂಡಿಸಿದ್ದಾರೆ ಎಂದರು.
ಈಶ್ವರ್ ಖಂಡ್ರೆ ಅವರು ಎರಡು ದಶಕಗಳ ಕಾಲ ನಾಲ್ಕು ಬಾರಿ ಶಾಸಕರಾಗಿ, ಸಚಿವರಾಗಿ ಆಯ್ಕೆಯಾಗಿ ಅನೇಕ ಜನಪರ ಕೆಲಸಗಳು ಮಾಡಿದ್ದಾರೆ. ಹಾಗೆಯೇ ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷರಾಗಿಯೂ ಅವರು ಕೆಲಸ ಮಾಡಿದ್ದಾರೆ. ಎಲ್ಲ ಜಾತಿ ಜನಾಂಗದ ಜನರಿಗೆ ತಮ್ಮ ಜೊತೆಗೆ ತೆಗೆದುಕೊಂಡು ಹೋಗುವ ಕೆಲಸ ಅವರು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಜಾತ್ಯತೀತ ಸಿದ್ಧಾಂತದ ತತ್ವದ ಮೇಲೆ ಅಪಾರವಾದ ನಂಬಿಕೆ ಇಟ್ಟುಕೊಂಡಿರುವ ಈಶ್ವರ್ ಖಂಡ್ರೆ ಅವರು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೂಡ ನ್ಯಾಯ ಕೊಡಿಸುತ್ತಾರೆ. ಬರುವ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಈಶ್ವರ್ ಖಂಡ್ರೆ ಅವರನ್ನು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಿ ಎಲ್ ಡಿ ಬ್ಯಾಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ, ನಿಸಾರ್ ಅಹಮ್ಮದ್, ಗುಂಡೆರಾವ್ ಪಾಟೀಲ್, ಮಹಮ್ಮದ್ ಖಾನ್, ಮುಸ್ತಾಕ್ ಅಹಮ್ಮದ್, ಪ್ರದೀಪ್ ನಾಟೆಕರ್, ಸೋನು ನಾಗಸೇನ್, ರಾಜಕುಮಾರ್ ಹಾಳೆ, ಮಲ್ಲಿಕಾರ್ಜುನ್ ಹಾಲಪುರ್ಗಾ ಹಾಗೂ ರಾಜಕುಮಾರ್ ನಾಯಕೋಡೆ ಸೇರಿದಂತೆ ಇತರರು ಇದ್ದರು.






