ಎಪ್ರಿಲ್ ಅಂತ್ಯದೊಳಗೆ 3 ಸಾವಿರ ಲೈನ್‍ಮೆನ್‍ಗಳ ನೇಮಕ : ಸಚಿವ ಕೆ.ಜೆ.ಜಾರ್ಜ್

ಬೀದರ್ : ರಾಜ್ಯದಲ್ಲಿ ಲೈನ್ ಮೆನ್‍ಗಳ ಕೊರತೆ ನೀಗಿಸಲು ಎಪ್ರಿಲ್ ಅಂತ್ಯದೊಳಗೆ 3 ಸಾವಿರ ಲೈನ್ ಮೆನ್ ಗಳನ್ನು ನೇಮಕ ಮಾಡಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಗುರುವಾರ ಬೀದರ್ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಜನಪತಿನಿಧಿಗಳು ಮತ್ತು ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಲ್ಲಿ ಲೈನ್ ಮೆನ್ ಗಳ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ 3 ಸಾವಿರ ಲೈನ್ ಮನ್ ಗಳ ನೇಮಕ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು ಎಂದರು.
ಟ್ರಾನ್ಸ್ ಫಾರ್ಮರ್ ಗಳ ರಿಪೇರಿ, ಅದರಲ್ಲೂ ಮುಖ್ಯವಾಗಿ ರೈತರಿಗೆ ವಿದ್ಯುತ್ ಪೂರೈಸುವ ಟ್ರಾನ್ಸ್ ಫಾರ್ಮರ್ ಗಳ ದುರಸ್ತಿ ಅಥವಾ ಬದಲಾವಣೆಗೆ ತುರ್ತು ಕ್ರಮ ಕೈಗೊಳ್ಳಬೇಕು. ವಿದ್ಯುತ್ ತಂತಿ, ಕಂಬಗಳ ದುರಸ್ತಿ ಸೇರಿದಂತೆ ವಿದ್ಯುತ್ ಪೂರೈಕೆಯಲ್ಲಿ ಆಗುವ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಿ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ಅವರು ತಾಕೀತು ಮಾಡಿದರು.
ಕಳೆದ ವರ್ಷ ಬರಗಾಲವಿದ್ದರೂ ಬೇಸಿಗೆಯಲ್ಲಿ ಯಾವುದೇ ತೊಂದರೆಯಾಗದಂತೆ ಸಮರ್ಪಕವಾಗಿ ವಿದ್ಯುತ್ ಪೂರೈಸಲಾಗಿದ್ದು, ಈ ಬಾರಿಯೂ ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಪೂರೈಸಲು ಇಲಾಖೆ ಸನ್ನದ್ಧವಾಗಿದೆ. ವಿದ್ಯುತ್‍ಗೆ ಸಂಬಂಧಿಸಿದಂತೆ ಕೆಲ ತಾಂತ್ರಿಕ ದೋಷಗಳು ಆಗಾಗ್ಗೆ ಕಂಡುಬರುತ್ತಿರುವುದರಿಂದ ಕೆಲವೊಮ್ಮೆ ಸಮಸ್ಯೆಗಳ ನಿವಾರಣೆಗೆ ಸಮಯ ಬೇಕಾಗುತ್ತದೆ. ಆದರೆ, ಈ ಎಲ್ಲ ಕಾರ್ಯವನ್ನು ಕಾಲಮಿತಿಯಲ್ಲಿ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಅವರು ತಿಳಿಸಿದರು.
ಇಲಾಖೆ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳನ್ನು ಭೇಟಿಯಾಗಿ ಅವರ ವ್ಯಾಪ್ತಿಯಲ್ಲಿರುವ ಸಮಸ್ಯೆಗಳ ಕುರಿತು ಚರ್ಚಿಸಿ ಅವುಗಳನ್ನು ಬಗೆಹರಿಸಬೇಕು. ವಿದ್ಯುತ್ ಪೂರೈಕೆಗೆ ಯಾವುದೇ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ಜಪ್ರತಿನಿಧಿಗಳ ಗಮನಕ್ಕೆ ತಂದು ಅವರ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಜಾರ್ಜ್ ಸೂಚಿಸಿದರು.
ರಾಜ್ಯದಲ್ಲಿ ಸದ್ಯ ದಿನಕ್ಕೆ 16 ರಿಂದ 17 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆಯಿದೆ. ಈ ವರ್ಷ ಯಾವುದೇ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ. ಬೇಸಿಗೆಯಲ್ಲಿ ಬೇಡಿಕೆ ಹೆಚ್ಚಾದರೆ ವಿದ್ಯುತ್ ಖರೀದಿಗೂ ಸಿದ್ಧವಾಗಿದ್ದೇವೆ. ಅಕ್ರಮ ಪಂಪ್ ಸೆಟ್‍ಗಳನ್ನು ಸಕ್ರಮಗೊಳಿಸಲು ಈ ಹಿಂದೆ ಸಲ್ಲಿಸಿದ್ದ ಅರ್ಜಿಗಳನ್ನು ಶೀಘ್ರವೇ ವಿಲೇವಾರಿ ಮಾಡಲಾಗುವುದು. ಬಳಿಕ ಹೊಸದಾಗಿ ಅಕ್ರಮ-ಸಕ್ರಮಕ್ಕೆ ಸಲ್ಲಿಸಿದ್ದ ಅರ್ಜಿಗಳ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಬೀದರ್ ಜಿಲ್ಲೆಯಲ್ಲಿ ಒಟ್ಟು 1,480 ಹೊಸ ಅರ್ಜಿಗಳು ಅಕ್ರಮ-ಸಕ್ರಮ ಯೋಜನೆಯಲ್ಲಿ ಸಲ್ಲಿಕೆಯಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಾರ್ಜ್ ತಿಳಿಸಿದರು.
ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಜಿಲ್ಲೆಯಲ್ಲಿ ವಿದ್ಯುತ್ ಅವಘಡದಲ್ಲಿ ಮರಣ ಹೊಂದಿದ 9 ಜನರ ಕುಟುಂಬಕ್ಕೆ ಈವರೆಗೂ ಪರಿಹಾರ ನೀಡದ ಬಗ್ಗೆ ಇಂಧನ ಸಚಿವರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಕೆ.ಜೆ.ಜಾರ್ಜ್, ಮಂದಿನ 3 ದಿನದೊಳಗಾಗಿ ಪರಿಹಾರ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ 13 ಉಪ ಕೇಂದ್ರಗಳ ಸ್ಥಾಪನೆಗೆ ಜಾಗದ ಸಮಸ್ಯೆಗಳಿದ್ದಲ್ಲಿ ಸ್ಥಳೀಯ ಶಾಸಕರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಅಧಿಕಾರಿಗಳು ತಕ್ಷಣ ಕಾರ್ಯ ಪ್ರವೃತ್ತರಾಗಬೇಕು. ಅಪಾಯಕಾರಿ ವಿದ್ಯುತ್ ತಂತಿ ಹಾಗೂ ಕಂಬಗಳ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಹಲವಾರು ತಿಂಗಳ ಹಿಂದೆ ಹೇಳಲಾಗಿದೆ. ಅಧಿಕಾರಿಗಳು ನಿರ್ಲಕ್ಷ ತೋರದೆ ಒಟ್ಟು ಅಪಾಯಕಾರಿ ಸ್ಥಿತಿಗತಿ ವರದಿ ನೀಡುವಂತೆ ಹಾಗೂ ತುರ್ತು ಅಗತ್ಯವಿದ್ದಲ್ಲಿ ತಕ್ಷಣವೇ ಕಂಬ/ತಂತಿ ಸರಿಪಡಿಸುವಂತೆ ಜಾರ್ಜ್ ಸೂಚಿಸಿದರು.







