ಬೀದರ್: ವಿವಿಧ ಬೇಡಿಕೆಗಳು ಈಡೇರಿಸಲು ಆಗ್ರಹಿಸಿ ಆಶಾ ಕಾರ್ಯಕರ್ತೆಯರಿಂದ ಧರಣಿ

ಬೀದರ್: ವಿವಿಧ ಬೇಡಿಕೆಗಳು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಎ ಐ ಯು ಟಿ ಯು ಸಿ) ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದೆ.
ಇಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಆಶಾ ಕಾರ್ಯಕರ್ತೆಯರು ಆಗಮಿಸಿ, ರ‍್ಯಾಲಿ ಮೂಲಕ ಭಗತ್ ಸಿಂಗ್ ವೃತ್ತ, ಶಿವಾಜಿ ವೃತ್ತದ ಮೂಲಕ ಮತ್ತೆ ಅಂಬೇಡ್ಕರ್ ವೃತ್ತದ ಮುಂದಿರುವ ಫುಟ್ ಪಾತ್ ಮೇಲೆ ಟೆಂಟ್ ಹೊಡೆದು ಧರಣಿಗೆ ಕುಳಿತುಕೊಂಡರು.
ಈ ಅಹೋರಾತ್ರಿ ಧರಣಿ ಸತ್ಯಾಗ್ರಹವು ಇಂದು ಪ್ರಾರಂಭವಾಗಿ ಆ. 14 ರಂದು ಮುಕ್ತಾಯವಾಗಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದರು. ಬೆಂಗಳೂರಿನ ಫ್ರಿಡಂ ಪಾರ್ಕ್ ನ ಪ್ರತಿಭಟನಾ ಸ್ಥಳಕ್ಕೆ ಆರೋಗ್ಯ ಇಲಾಖೆಯ ಆಯುಕ್ತರು ಆಗಮಿಸಿ ತೀರ್ಮಾನಗಳು ಘೋಷಣೆ ಮಾಡಿದರು. ಆದಾದ ನಂತರ ನಾವು ಅಲ್ಲಿನ ಪ್ರತಿಭಟನೆ ಹಿಂತೆಗೆದುಕೊಂದೆವು. ಆದರೆ ಅದಾದ 7 ತಿಂಗಳು ಕಳೆದರೂ ಕೂಡ ಈ ಕುರಿತು ಸ್ಪಷ್ಟ ಆದೇಶ ಹೊರಬಿದ್ದಿಲ್ಲ. ಹಾಗಾಗಿ ಈಗ ಪ್ರತಿ ಜಿಲ್ಲೆಯಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.
ಪ್ರೋತ್ಸಾಹ ಧನ ಸೇರಿಸಿ ಎಪ್ರಿಲ್ ತಿಂಗಳಿಂದ ಮಾಸಿಕ ಕನಿಷ್ಠ 10 ಸಾವಿರ ರೂ. ನೀಡುವಂತೆ ಆದೇಶ ಹೊರಡಿಸಬೇಕು. ಬಿಸಿಯೂಟ ಕಾರ್ಯಕರ್ತೆಯರಿಗೆ ಹೆಚ್ಚಿಸಿದಂತೆ ಆಶಾ ಕಾರ್ಯಕರ್ತೆಯರಿಗೂ 1 ಸಾವಿರ ರೂ. ಪ್ರೋತ್ಸಾಹ ಧನ ಹೆಚ್ಚಿಸಬೇಕು. ಅವಿಜ್ಞಾನಿಕ ಕಾರ್ಯನಿರ್ವಹಣಾ ಮೌಲ್ಯ ಮಾಪನ ಕೈ ಬಿಡಬೇಕು. ನಗರ ಆಶಾ ಕಾರ್ಯಕರ್ತೆಯರಿಗೆ 2 ಸಾವಿರ ರೂ. ಗೌರವ ಧನ ಹೆಚ್ಚಿಸಬೇಕು ಎನ್ನುವ ಬೇಡಿಕೆಗಳ ಜೊತೆಗೆ ಇನ್ನು ಹಲವು ಬೇಡಿಕೆಗಳು ಈಡೇರಿಸಲು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಎಐಯುಟಿಯುಸಿ ಸಂಘದ ಕಚೇರಿ ಕಾರ್ಯದರ್ಶಿ ರೂತ್, ಜಿಲ್ಲಾಧ್ಯಕ್ಷೆ ಮಹಾದೇವಿ, ಜಿಲ್ಲಾ ಕಾರ್ಯದರ್ಶಿ ಮೇರಿ, ಉಪಾಧ್ಯಕ್ಷರಾದ ರುಕ್ಮಿಣಿ, ರತ್ನಮ್ಮ, ದೇವಿಕಾ, ಗೋದಾವರಿ, ಜಯಾ, ಸುಸಲಮ್ಮ, ಜಂಟಿ ಕಾರ್ಯದರ್ಶಿಗಳಾದ ಸುವರ್ಣ, ಶೀಲಾ, ಶಾಂತಮ್ಮ, ಜ್ಯೋತಿ, ಲಕ್ಷ್ಮೀ, ಸಂಗೀತಾ ಹಾಗೂ ಶಾಂಭವಿ ಸೇರಿದಂತೆ ನೂರಾರು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.







