ಭಾಲ್ಕಿಯಲ್ಲಿ ಎಟಿಎಂ ಕಳ್ಳತನ : ತಜ್ಞರಿಂದ ಸ್ಥಳ ಪರಿಶೀಲನೆ

ಭಾಲ್ಕಿ : ನಗರದ ಚನ್ನಬಸವಾಶ್ರಮ ಮಳಿಗೆಯಲ್ಲಿರುವ ಎಸ್ಬಿಐ ಎಟಿಎಂ ನಲ್ಲಿ ಶನಿವಾರ ಮಧ್ಯರಾತ್ರಿ ಕಳ್ಳತನ ನಡೆದಿದ್ದು, ಪೊಲೀಸರು ಹಾಗೂ ವಿಧಿವಿಜ್ಞಾನ ತಜ್ಞರಿಂದ ಸ್ಥಳ ಪರಿಶೀಲನೆ ನಡೆಸಲಾಗಿದೆ.
ನಗರದ ತಹಶೀಲ್ದಾರ್ ಕಚೇರಿ ಹಾಗೂ ಎಸ್ಬಿಐ ಬ್ಯಾಂಕಿನ ಎದುರುಗಡೆಯ ಚನ್ನಬಸವಾಶ್ರಮ ಮಳಿಗೆಯಲ್ಲಿರುವ ಎಸ್ಬಿಐನ ಎಟಿಎಂ ನಲ್ಲಿ ಕಳ್ಳತನ ನಡೆದಿದೆ. ಎಟಿಎಂ ಅನ್ನು ಗ್ಯಾಸ್ ಕಟರ್ ನಿಂದ ಕತ್ತರಿಸಿ ಕಳ್ಳತನ ಮಾಡಲಾಗಿದೆ ಎನ್ನಲಾಗಿದ್ದು, ಎಷ್ಟು ಹಣ ಕಳ್ಳತನವಾಗಿದೆ ಎನ್ನುವ ಬಗ್ಗೆ ಮಾಹಿತಿ ದೊರಕಬೇಕಿದೆ.
ಬೀದರ್ನ ಎಟಿಎಂ ದರೋಡೆ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಕೆಲ ದಿನಗಳಲ್ಲಿಯೇ ಭಾಲ್ಕಿಯಲ್ಲಿ ಈ ರೀತಿ ಎಟಿಎಂ ಕಳ್ಳತನ ನಡೆದಿದ್ದು, ಜನರಲ್ಲಿ ಆತಂಕ ಹುಟ್ಟಿಸಿದೆ. ಎಟಿಎಂ ಗಳಿಗೆ ಭದ್ರತಾ ಸಿಬ್ಬಂದಿ, ಸಿಸಿಟಿವಿ ಸೇರಿದಂತೆ ಇತರೆ ಭದ್ರತೆಯನ್ನು ಒದಗಿಸುವಲ್ಲಿ ಆಡಳಿತ ಸೋಲುತ್ತಿದೆಯೇ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಘಟನಾ ಸ್ಥಳಕ್ಕೆ ಪೊಲೀಸರು, ಫೋರೆನ್ಸಿಕ್ ಲ್ಯಾಬ್ನ ತಂಡ ಸೇರಿದಂತೆ ಇತರ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.






