ಭಾಲ್ಕಿ ಕ್ಷೇತ್ರದಲ್ಲಿ ನೈಜ ಮತದಾರರ ಹೆಸರು ಅಳಿಸಲು ಪ್ರಯತ್ನ, ಈ ಕುರಿತು ಸಮಗ್ರ ತನಿಖೆಯಾಗಲಿ : ತಾಹೇರ್ ಹುಸೈನ್

ಬೀದರ್ : ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ನೈಜ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲು ಫಾರಂ–7 ಅರ್ಜಿಗಳನ್ನು ವ್ಯಾಪಕವಾಗಿ ಸಲ್ಲಿಸಿರುವ ಕುರಿತು ಗಂಭೀರ ಆರೋಪಗಳು ಕೇಳಿ ಬಂದಿದ್ದು, ಈ ಬಗ್ಗೆ ಚುನಾವಣಾ ಆಯೋಗ ಹಾಗೂ ಜಿಲ್ಲಾ ಆಡಳಿತವು ತಕ್ಷಣ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ತಾಹೇರ್ ಹುಸೈನ್ ಅವರು ಆಗ್ರಹಿಸಿದರು.
ನಗರದ ಖಾಸಗಿ ಹೋಟೆಲ್ ವೊಂದರಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ತಾಹೇರ್ ಹುಸೈನ್, ನಾವು ಪ್ರಾಥಮಿಕವಾಗಿ ಸಂಗ್ರಹಿಸಲಾದ ಮಾಹಿತಿಯ ಪ್ರಕಾರ, ಭಾಲ್ಕಿಯಲ್ಲಿ ಒಟ್ಟು ಮೂರು ವಾರ್ಡ್ ಗಳಲ್ಲಿ ಸುಮಾರು 1,198 ಮತದಾರರ ಹೆಸರುಗಳನ್ನು ಅಳಿಸುವಂತೆ ಫಾರಂ–7 ಅರ್ಜಿಗಳನ್ನು ಸಲ್ಲಿಸಲಾಗಿದೆ. ಇದೇ ರೀತಿಯಾಗಿ ಹಲವು ವಾರ್ಡ್‌ಗಳಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರ ಹೆಸರುಗಳನ್ನು ಅಳಿಸಲು ಅರ್ಜಿಗಳು ಸಲ್ಲಿಸಿರುವ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದರು.
ವಿಶೇಷವಾಗಿ ಈ ಅರ್ಜಿಗಳಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ನೈಜ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಒಳಗೊಂಡಿರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಮತದಾರರ ಪಟ್ಟಿಯ ಪರಿಷ್ಕರಣೆಯ ಸಾಮಾನ್ಯ ಪ್ರಕ್ರಿಯೆಯ ಭಾಗವಾಗಿದ್ದರೆ, ಅರ್ಜಿಗಳ ಹಿಂದಿನ ಕಾರಣಗಳು, ಅರ್ಜಿದಾರರ ವಿವರಗಳು ಮತ್ತು ಸಂಬಂಧಿತ ದಾಖಲೆಗಳನ್ನು ಪಾರದರ್ಶಕವಾಗಿ ಪರಿಶೀಲಿಸುವ ಅಗತ್ಯವಿದೆ ಎಂದರು.
ಭಾಲ್ಕಿ ಕ್ಷೇತ್ರದಲ್ಲಿ ಸಲ್ಲಿಕೆಯಾಗಿರುವ ಫಾರಂ–7 ಅರ್ಜಿಗಳ ಕುರಿತು ಚುನಾವಣಾ ಆಯೋಗ ಮತ್ತು ಜಿಲ್ಲಾ ಆಡಳಿತವು ವಿಶೇಷ ತನಿಖೆ ನಡೆಸಬೇಕು. ಯಾವುದೇ ಅರ್ಹ ಮತ್ತು ನೈಜ ಮತದಾರನ ಹೆಸರನ್ನು ಅನ್ಯಾಯವಾಗಿ ಮತದಾರರ ಪಟ್ಟಿಯಿಂದ ತೆಗೆದುಹಾಕಬಾರದು. ವಿಶೇಷವಾಗಿ ಯಾವುದೇ ಒಂದು ಸಮುದಾಯದ ಮತದಾರರನ್ನು ಗುರಿಯಾಗಿಸಿಕೊಂಡು ಮತದಾರರ ಪಟ್ಟಿಯಲ್ಲಿ ಬದಲಾವಣೆ ಮಾಡುವ ಪ್ರಯತ್ನ ನಡೆದಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು. ತಪ್ಪು ಅಥವಾ ದುರುದ್ದೇಶಪೂರ್ವಕವಾಗಿ ಸಲ್ಲಿಸಲಾದ ಅರ್ಜಿಗಳು ಕಂಡುಬಂದರೆ, ಅದರ ಹಿಂದೆ ಇರುವವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮತದಾನದ ಹಕ್ಕು ಪ್ರಜಾಪ್ರಭುತ್ವದ ಮೂಲಭೂತ ಹಕ್ಕು. ಪ್ರತಿಯೊಬ್ಬ ಅರ್ಹ ಮತದಾರನ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸುರಕ್ಷಿತವಾಗಿ ಉಳಿಸುವುದು ಚುನಾವಣಾ ಆಯೋಗದ ಜವಾಬ್ದಾರಿಯಾಗಿದೆ. ಪ್ರಜಾಪ್ರಭುತ್ವ ಮತ್ತು ನಾಗರಿಕರ ಬೆನ್ನಿಗೆ ಚೂರಿ ಹಾಕಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಮತದಾರರ ಪಟ್ಟಿ ಕೇವಲ ಆಡಳಿತಾತ್ಮಕ ದಾಖಲೆ ಅಲ್ಲ. ಅದು ಪ್ರತಿಯೊಬ್ಬ ನಾಗರಿಕನ ಪ್ರಜಾಸತ್ತಾತ್ಮಕ ಹಕ್ಕಿನ ಆಧಾರವಾಗಿದೆ. ಮತದಾರರ ಹಕ್ಕು ರಕ್ಷಿಸಬೇಕು. ಮತದಾರರ ಪಟ್ಟಿ ಪಾರದರ್ಶಕವಾಗಬೇಕು. ಚುನಾವಣಾ ಪ್ರಕ್ರಿಯೆಯ ಮೇಲಿನ ಜನರ ವಿಶ್ವಾಸ ಉಳಿಯಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಮುಬಶೀರ್ ಶಿಂದೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಹಾಗೂ ತಾಲೂಕಾಧ್ಯಕ್ಷ ಜಾವೀದ್ ಸೇರಿದಂತೆ ಪಕ್ಷದ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.






