ಔರಾದ್ | ಯುವ ಸಮೂಹದಲ್ಲಿ ಜಡ ಮನಸ್ಥಿತಿ ಬದಲಾದಾಗ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಸಾಧ್ಯ : ನಾಗನಾಥ್ ಚಿಟಮೆ

ಔರಾದ್ : ಯುವಕರ ಮನೋಭಾವ ಬದಲಾಗಿದ್ದು “ನಮ್ಮ ಅಭಿವೃದ್ಧಿ ನಮ್ಮ ಕೈಯಲ್ಲಿ” ಎಂಬ ಧ್ಯೇಯದೊಂದಿಗೆ ಮುಂದುವರಿದಾಗ ಮಾತ್ರ ಕಲ್ಯಾಣ ಕರ್ನಾಟಕ ಪ್ರಗತಿಯ ಹಾದಿ ಹಿಡಿಯಲಿದೆ ಎಂದು ನಿವೃತ್ತ ಶಿಕ್ಷಕ ಹಾಗೂ ಸಾಹಿತಿ ನಾಗನಾಥ್ ಚಿಟಮೆ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಮಂಗಳವಾರ ನಡೆದ ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿ ಚಿಂತನೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಪಂಚದ ಅತ್ಯುತ್ತಮ ಸಂಪತ್ತು ಮಾನವ ಸಂಪತ್ತು. ಬಸವಾದಿ ಶರಣರು, ಪಂಪ, ಪೊನ್ನ, ರನ್ನ, ನೃಪತುಂಗರು ಬಾಳಿ ಬೆಳಗಿದ ಈ ನಾಡು ಕಲ್ಯಾಣ ನಾಡಾಗಿದೆ. ಗುಣಾತ್ಮಕ ಶಿಕ್ಷಣದೊಂದಿಗೆ ಮಾನವ ಸಂಪನ್ಮೂಲ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕಿದೆ. ಪ್ರಜ್ಞಾವಂತ ನಾಯಕರ ಕೊರತೆಯಿಂದ ಕಲ್ಯಾಣ ಕರ್ನಾಟಕ ಹಲವು ವರ್ಷ ನಿರ್ಲಕ್ಷ್ಯಕ್ಕೆ ಒಳಪಟ್ಟಿತ್ತು ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ವಿರೇಂದ್ರ ಪಾಟೀಲ್, ಧರಂ ಸಿಂಗ್, ಮಲ್ಲಿಕಾರ್ಜುನ್ ಖರ್ಗೆ, ಯಡಿಯೂರಪ್ಪ ಹಾಗೂ ಹೋರಾಟಗಾರ ಡಾ.ವೈಜಿನಾಥ್ ಪಾಟೀಲ್ ಅವರ ಕೊಡುಗೆಗಳನ್ನು ಸ್ಮರಿಸಿ, 371 (ಜೆ) ಮೀಸಲಾತಿ ಮುಂದಿನ ದಿನಗಳಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಅಭಿಪ್ರಾಯಪಟ್ಟರು.
ಎನ್‌ಪಿಎಸ್ ನೌಕರ ಸಂಘದ ಅಧ್ಯಕ್ಷ ಮಹಾದೇವ್ ಚಿಟಗೀರೆ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯೆ ಅಂಬಿಕಾ ಕೊತ್ಮಿರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಂಬಾದಾಸ್ ನಳಗೆ, ಕಸಾಪ ಅಧ್ಯಕ್ಷ ಬಿ.ಎಂ. ಅಮರವಾಡಿ, ಜಗನ್ನಾಥ್ ದೇಶಮುಖ, ಧನರಾಜ್ ಮಾನೆ, ಅಮರಸ್ವಾಮಿ ಸ್ಥಾವರಮಠ್, ಸಂದೀಪ್ ಪಾಟೀಲ್, ವಿನಾಯಕ ಕೊತ್ಮಿರ್, ಗುಡದಮ್ಮ, ಪದ್ಮಾಂಜಲಿ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







