Aurad | ಬೋರ್ವೇಲ್ ಕೊರೆಸಲು ಅಡ್ಡಿ ಆರೋಪ : ಸರ್ವೇ ನಡೆಸಲು ಗ್ರಾಮಸ್ಥರ ಒತ್ತಾಯ

ಔರಾದ್: ಬೇಸಿಗೆ ತೀವ್ರಗೊಳ್ಳುತ್ತಿದ್ದಂತೆ ತಾಲೂಕಿನ ಮಹಾರಾಜವಾಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಹೊಸ ಬೋರ್ವೆಲ್ ಕೊರೆಸಲು ಅಧಿಕಾರಿಗಳು ಮುಂದಾಗಬೇಕಾದ ಸಂದರ್ಭದಲ್ಲಿ ಗ್ರಾಮದ ಕೆಲ ಪ್ರಭಾವಿಗಳು ಅಡ್ಡಿಪಡಿಸುತ್ತಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೂಲಕ ತಹಶೀಲ್ದಾರ್ ಅವರಿಗೆ ಶನಿವಾರ ಮನವಿ ಸಲ್ಲಿಸಿರುವ ಗ್ರಾಮಸ್ಥರು, ಗ್ರಾಮದಲ್ಲಿ ನೀರಿನ ಕೊರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ತಿಳಿಸಿದ್ದಾರೆ.
ಸೂಚಿಸಲಾದ ಸ್ಥಳದಲ್ಲಿ ಬೋರ್ವೆಲ್ ಕೊರೆಸಲು ಅವಕಾಶ ನೀಡದೆ, “ಈ ಜಾಗ ನಮ್ಮದು” ಎಂದು ಕೆಲವರು ತಕರಾರು ಮಾಡುತ್ತಿರುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರಗೊಂಡಿದೆ ಎಂದು ದೂರಿದ್ದಾರೆ.
ಇದರಿಂದ ಸಾರ್ವಜನಿಕರಿಗೆ ಕುಡಿಯುವ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೊರಳ್ಳಿ ರಸ್ತೆಯ ಸರ್ಕಾರಿ ಭೂಮಿಯಲ್ಲಿ ಸರ್ವೇ ನಡೆಸಿ ಸೂಕ್ತ ಸ್ಥಳ ಗುರುತಿಸಿ ತಕ್ಷಣ ಬೋರ್ವೆಲ್ ಕೊರೆಸಲು ಸಂಬಂಧಿತ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಂದೀಪ್ ಪಾಟೀಲ್, ತುಕಾರಾಮ್ ಬಿರಾದಾರ್, ಗೋಪಾಲರಾವ್ ಬಿರಾದಾರ್, ನಾಗನಾಥ್ ನಿಟ್ಟೂರೆ, ಶಾಂತಪ್ಪ ಅಮಲಾಪುರೆ, ನಾಗಗೊಂಡ್ ಮೇತ್ರೆ, ಬಸವರಾಜ್, ಮಲ್ಲಪ್ಪ ಮೇತ್ರೆ, ಮಕ್ಸುದ್, ಬಾಲಾಜಿ ನಿಟ್ಟೂರೆ ಹಾಗೂ ಧನರಾಜ್ ಮಾಲೇಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.






