Aurad | ಸೋಯಾಬಿನ್ ವಿತರಣೆಯಲ್ಲಿ ಭ್ರಷ್ಟಾಚಾರ ಆರೋಪ : ಕ್ರಮಕ್ಕೆ ಆಗ್ರಹ

ಔರಾದ್: ಮುಂಗಾರು ಹಂಗಾಮಿನ ಸೋಯಾಬಿನ್ ಬಿತ್ತನೆ ಬೀಜಗಳ ವಿತರಣೆಯಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದು, ಕರ್ನಾಟಕದ ರೈತರಿಗೆ ಸಿಗಬೇಕಾದ ಸಬ್ಸಿಡಿ ದರದ ಬೀಜಗಳನ್ನು ನೆರೆಯ ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯದ ರೈತರಿಗೆ ಅಕ್ರಮವಾಗಿ ವಿತರಿಸಲಾಗಿದೆ ಎಂದು ರಾಷ್ಟ್ರೀಯ ಅಹಿಂದ ಸಂಘಟನೆ ಗಂಭೀರ ಆರೋಪ ಮಾಡಿದೆ.
ಈ ಕುರಿತು ಜಂಟಿ ಕೃಷಿ ನಿರ್ದೇಶಕರಿಗೆ ಸಲ್ಲಿಸಿದ ಮನವಿಯಲ್ಲಿ, ರಾಜ್ಯದ ರೈತರಿಗೆ ಮೀಸಲಾಗಿರುವ ಬಿತ್ತನೆ ಬೀಜಗಳನ್ನು ಗಡಿ ಭಾಗದ ಮಹಾರಾಷ್ಟ್ರ ಮತ್ತು ತೆಲಂಗಾಣ ರೈತರಿಗೆ ನೀಡಲಾಗುತ್ತಿದೆ ಎಂದು ದೂರಲಾಗಿದೆ. ಔರಾದ್ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಣೆಯಲ್ಲಿ ಪಾರದರ್ಶಕತೆ ಇಲ್ಲದೆ ಅಧಿಕಾರಿಗಳು ಮನಬಂದಂತೆ ವರ್ತಿಸುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಸಮರ್ಪಕ ಉತ್ತರ ನೀಡುತ್ತಿಲ್ಲ ಎಂದು ಆರೋಪಿಸಲಾಗಿದೆ.
ಔರಾದ್ ಕ್ಷೇತ್ರದ ಬಾವಲಗಾಂವ್, ಸಾವರಗಾಂವ್, ಹೊಕ್ರಣಾ, ಭಂಡಾರಕುಮಟಾ, ಖೇರ್ಡಾ, ಹುಲ್ಯಾಳ್, ಎಕಂಬಾ, ಜಮಾಲಪೂರ್, ಖಂಡೇಕೇರಿ, ಹಸ್ಸಿಕೇರಿ, ಗೌಂಡಗಾಂವ್, ಡೋಣಗಾಂವ್, ಮುಂಗನಾಳ್, ಬೋರಾಳ್, ಕಪ್ಪೆಕೇರಿ, ಎಕಲಾರ್ ಹಾಗೂ ಅಲ್ಲಾಪೂರ್ ಸೇರಿದಂತೆ ಹಲವು ಗ್ರಾಮಗಳ ರೈತರು ಬಿತ್ತನೆ ಬೀಜಕ್ಕಾಗಿ ರೈತ ಸಂಪರ್ಕ ಕೇಂದ್ರದ ಮುಂದೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಂಘಟನೆ ತಿಳಿಸಿದೆ.
ಸ್ಥಳೀಯ ರೈತರಿಗೆ ರಿಯಾಯಿತಿ ದರದಲ್ಲಿ ಬೀಜ ನೀಡದೆ ಸತಾಯಿಸಲಾಗುತ್ತಿದ್ದು, ಲಂಚ ಪಡೆದು ಅನ್ಯ ರಾಜ್ಯದ ರೈತರಿಗೆ ಅಕ್ರಮವಾಗಿ ಬೀಜ ಮಾರಾಟ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಮನವಿಯಲ್ಲಿ ಮಾಡಲಾಗಿದೆ.
ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಒಂದು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರೈತ ಸಂಪರ್ಕ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ರಾಷ್ಟ್ರೀಯ ಅಹಿಂದ ಸಂಘಟನೆ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಯುವ ಘಟಕದ ಅಧ್ಯಕ್ಷ ಲಕ್ಷ್ಮಣ ದೇವಕತ್ತೆ, ರಮೇಶ್ ಚವ್ಹಾಣ್, ಘಾಳೆಪ್ಪ ಬೆಂಬಳಖೇಡೆ, ರಾಜು ಮುದಾಳೆ, ಸಚಿನ್, ಅಮರ್ ದ್ಯಾಡೆ, ಮಲ್ಲಿಕಾರ್ಜುನ್ ಹೊಳಸಮುದ್ರ, ರವೀಂದ್ರ ಬಳತೆ ಹಾಗೂ ರಮೇಶ್ ಕಾಂಬಳೆ ಸೇರಿದಂತೆ ಇತರರು ಇದ್ದರು.






