ಔರಾದ್ | ಬೀದಿ ನಾಯಿಗಳ ಹಾವಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹ

ಔರಾದ್ : ಬೀದಿ ನಾಯಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ವೀರಶೈವ ಲಿಂಗಾಯತ ಸಂಘಟನೆಯ ಅಧ್ಯಕ್ಷ ಆನಂದ್ ದ್ಯಾಡೆ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಇಂದು ಪಟ್ಟಣ ಪಂಚಾಯತ್ ಮುಖ್ಯಧಿಕಾರಿ ಹಾಗೂ ಪಶು ಅಸ್ಪತ್ರೆ ವೈದ್ಯಾಧಿಕಾರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ರಸ್ತೆಗೆ ತೆರಳುವ ಅಮಾಯಕರ ಮೇಲೆ ದಾಳಿ ಮಾಡುತ್ತಿವೆ. ಇದರಿಂದ ಪಟ್ಟಣದ ನಿವಾಸಿಗಳು ಕಲ್ಲು ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೀದಿ ನಾಯಿಗಳನ್ನು ಹಿಡಿದು ಸಾರ್ವಜನಿಕರು ಸುಗಮವಾಗಿ ಓಡಾಡುವ ವಾತಾವರಣ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ನಗರದ ಕುರುಬರ ಓಣಿ, ಬಸ್ ಡಿಪೋ ರಸ್ತೆ, ಶೆಟಕಾರ್ ಓಣಿ, ಬುಟ್ಟೆ ಗಲ್ಲಿ, ಪತಗೆ ಗಲ್ಲಿ, ಗೀರಣೆ ಲೇಔಟ್, ಶಿಕ್ಷಕರ ಕಾಲೋನಿ ಸೇರಿದಂತೆ ಪಟ್ಟಣದ ನಾನಾ ಬಡಾವಣೆಗಳಲ್ಲಿ ಬೀದಿ ನಾಯಿಗಳು ಬಿಡು ಬಿಟ್ಟಿದ್ದು, ಹಲವರ ಮೇಲೆ ದಾಳಿ ನಡೆಸಿವೆ. ಬಡಾವಣೆ ನಿವಾಸಿಗಳು ತನ್ನ ಮಕ್ಕಳಿಗೆ ಹೊರಗಡೆ ಬಿಡಲು ಭಯ ಬೀಳುತ್ತಿದ್ದಾರೆ. ಪಟ್ಟಣದ ನಿವಾಸಿಗಳ ಮೇಲೆ ದಾಳಿ ನಡೆಸಿ, ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ. ಶಾಲಾ ಕಾಲೇಜಿಗೆ ತೆರಳುವ ಮಕ್ಕಳಲ್ಲಿ ಭಯ ಆವರಿಸಿದೆ. ಕೂಡಲೇ ಪಟ್ಟಣ ಪಂಚಾಯತ್ ಅಧಿಕಾರಿ ಹಾಗೂ ಪಶು ಆಸ್ಪತ್ರೆ ಸಿಬ್ಬಂದಿಗಳು ಬೀದಿ ನಾಯಿಗಳನ್ನು ಹಿಡಿದು ಜನಸಾಮಾನ್ಯರ ಓಡಾಟಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ನಗರಾಧ್ಯಕ್ಷ ಅಮರಸ್ವಾಮಿ ಸ್ಥಾವರಮಠ್, ಚನ್ನಬಸವ ಗಜರೆ, ವಿವೇಕಾನಂದ್ ಉಪ್ಪೆ, ಶ್ರೀಕಾಂತ್ ಎಡವೆ, ಅವಿನಾಶ್ ಪಾಂಚಾಳ್, ಆನಂದ್ ಸೋನಾರ್, ಗಣೇಶ್ ಭಾಲ್ಕೆ ಹಾಗೂ ಕಿರಣ್ ಫುಲಾರಿ, ಸೇರಿದಂತೆ ಇತರರು ಇದ್ದರು.







