ಔರಾದ್ | ತ್ವರಿತವಾಗಿ ಬೆಳೆ ಪರಿಹಾರ ವಿತರಿಸಲು ಡಿಎಸ್ಎಸ್ ಮನವಿ

ಔರಾದ್ : ಮಳೆ ಹೆಚ್ಚಾಗಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಅಪಾರ ಹಾನಿಯುಂಟಾಗಿದ್ದು, ಸಮೀಕ್ಷೆ ನಡೆಸಿ ಸಂಕಷ್ಟದಲ್ಲಿರುವ ರೈತರಿಗೆ ತ್ವರಿತವಾಗಿ ಪರಿಹಾರ ವಿತರಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯು ಮನವಿ ಸಲ್ಲಿಸಿದೆ.
ಗ್ರೇಡ್-2 ತಹಶೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ ನಂತರ ಸಮಿತಿಯ ಜಿಲ್ಲಾ ಸಂಚಾಲಕ ಧನರಾಜ್ ಮುಸ್ತಾಪುರ್ ಅವರು ಮಾತನಾಡಿ, ಔರಾದ್ ತಾಲೂಕಿನಲ್ಲಿ ಸತತ 15 ದಿನಗಳಿಂದ ಅತಿವೃಷ್ಟಿ ಮಳೆಯಾಗಿ ರೈತರ ಬೆಳೆದ ಉದ್ದು, ಹೆಸರು, ಸೋಯಾ, ತೊಗರಿ ಇನ್ನಿತರ ಮಳೆ ಆಶ್ರಿತ ಬೆಳೆಗಳು ಸಂಪೂರ್ಣ ಕೊಚ್ಚಿ ಹೋಗಿ ಹಾಳಾಗಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕೂಡಲೇ ಸರಕಾರದ ಒಂದು ತಂಡ ರಚಿಸಿ, ರೈತರ ಹೊಲಗಳಿಗೆ ಹೋಗಿ ಕುಲಂಕುಶವಾಗಿ ಪರಿಶೀಲಿಸಿ ಬೆಳೆ ಹಾಳಾದ ರೈತರಿಗೆ ಸರ್ಕಾರದಿಂದ ಪರಿಹಾರ ಒದಗಿಸಬೇಕು. ಹಾಗೆಯೇ ಬೆಳೆ ವಿಮಾ ಕಟ್ಟಿರುವ ರೈತರ ಖಾತೆಗೆ ನೇರವಾಗಿ ಹಣ ಬಿಡುಗಡೆ ಮಾಡಬೇಕು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿಜಯಕುಮಾರ್ ಚಟ್ನಳ್ಕರ್ ಹಾಗೂ ಘಾಳೆಪ್ಪ ಸೇಂಬೆಳ್ಳಿ ಸೇರಿದಂತೆ ಇತರರು ಇದ್ದರು.





