Aurad | ವಿಬಿಜಿ ರಾಮ್‌ಜಿ ಯೋಜನೆಯಡಿ ಹೆಚ್ಚು ಮಾನವ ದಿನ ಸೃಜನೆಗೆ ಒತ್ತು: ಡಾ.ಗಿರೀಶ್ ಬದೋಲೆ

ಔರಾದ್ : ವಿಬಿಜಿ ರಾಮ್‌ಜಿ ಯೋಜನೆಯಡಿ ಹೆಚ್ಚು ಮಾನವ ದಿನಗಳನ್ನು ಸೃಜಿಸಿ, ಅರ್ಹ ಗ್ರಾಮೀಣ ಕುಟುಂಬಗಳಿಗೆ ನಿರಂತರ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಯೋಜನೆಯ ಸೌಲಭ್ಯಗಳು ಪ್ರತಿಯೊಬ್ಬ ಫಲಾನುಭವಿಗೂ ತಲುಪುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ಸೂಚಿಸಿದರು.
ತಾಲೂಕಿನ ಧೂಪತಮಹಾಗಾಂವ್ ಗ್ರಾಮದಲ್ಲಿ ವಿಬಿಜಿ ರಾಮ್‌ಜಿ ಯೋಜನೆಯಡಿ ನಡೆಯುತ್ತಿರುವ ಸಿಸಿಟಿ (ಕಾಂಟೂರ್ ಟ್ರೆಂಚ್) ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಯೋಜನೆಯು ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸುವುದರ ಜೊತೆಗೆ ಜಲ ಸಂರಕ್ಷಣೆ, ಮಣ್ಣಿನ ಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣೆಗೆ ಪೂರಕವಾಗುವ ಶಾಶ್ವತ ಆಸ್ತಿಗಳ ನಿರ್ಮಾಣಕ್ಕೂ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.
ಗ್ರಾಮೀಣ ಕೂಲಿಕಾರರು ಉದ್ಯೋಗಕ್ಕಾಗಿ ವಲಸೆ ಹೋಗುವ ಅಗತ್ಯವಿಲ್ಲ. ಸರ್ಕಾರದ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮದಲ್ಲಿಯೇ ಸಾಕಷ್ಟು ಕೆಲಸದ ಅವಕಾಶಗಳು ಲಭ್ಯವಿದ್ದು, ಕೂಲಿಕಾರರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ವಿಬಿಜಿ ರಾಮ್‌ಜಿ ಯೋಜನೆಯಡಿ ದಿನಗೂಲಿಯನ್ನು 370 ರೂ. ನಿಂದ 382 ರೂ. ಗೆ ಹೆಚ್ಚಿಸಲಾಗಿದ್ದು, ವಾರ್ಷಿಕ ಉದ್ಯೋಗಾವಧಿಯನ್ನು 100 ದಿನಗಳಿಂದ 125 ದಿನಗಳಿಗೆ ವಿಸ್ತರಿಸಲಾಗಿದೆ. ಗ್ರಾಮೀಣ ಉದ್ಯೋಗ ಖಾತರಿ ಕಾರ್ಡ್ ಹೊಂದಿರುವ ಒಂದು ಕುಟುಂಬವು ವರ್ಷಕ್ಕೆ 47,750 ರೂ. ರವರೆಗೆ ಆದಾಯಗಳಿಸುವ ಅವಕಾಶ ಹೊಂದಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಹಾಯಕ ನಿರ್ದೇಶಕ ಜಯಪ್ರಕಾಶ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಪಾಟೀಲ್, ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆ, ಎಡಿಪಿಸಿ ದೀಪಕ್ ಕಡಿಮನಿ, ಗ್ರಾಮ ಪಂಚಾಯತ್ ಪಿಡಿಒ ನಂದಕಿಶೋರ್ ಶಾಸ್ತ್ರಿ, ತ್ರಾಂತಿಕ ಸಂಯೋಜಕ ಆನಂದ್ ಕಾಳಗಾಪೂರೆ, ತಾಂತ್ರಿಕ ಸಹಾಯಕ ಶರಣಪ್ಪ ಹಾಗೂ ಐಇಸಿ ಅಂಬಾದಾಸ್ ಪಾಟೀಲ್ ಸೇರಿದಂತೆ ಗ್ರಾಮ ಪಂಚಾಯತ್ ಸಿಬ್ಬಂದಿ ಮತ್ತು ಕೂಲಿ ಕಾರ್ಮಿಕರು ಇದ್ದರು.






