Aurad | ಸಮಾಜದ ಹಿತಕ್ಕಾಗಿ ಪತ್ರಿಕೋದ್ಯಮ ಬಳಕೆಯಾಗಲಿ : ರಶ್ಮಿ ಎಸ್.

ಔರಾದ್, ಜು.4: ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಜನರಿಗೆ ವಿಶ್ವಾಸಾರ್ಹ ಮಾಹಿತಿ ನೀಡುವುದು ಪತ್ರಕರ್ತರ ಪ್ರಮುಖ ಕರ್ತವ್ಯವಾಗಿದ್ದು, ಸ್ವಹಿತಕ್ಕಿಂತ ಸಮಾಜದ ಹಿತವೇ ಪತ್ರಿಕೋದ್ಯಮದ ಧ್ಯೇಯವಾಗಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯೆ ರಶ್ಮಿ ಎಸ್. ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ಪತ್ರಿಕೋದ್ಯಮ–ಇತಿಹಾಸ ಮತ್ತು ವರ್ತಮಾನ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಕಾಲೀನ ವಿದ್ಯಮಾನಗಳ ಕುರಿತು ಪತ್ರಕರ್ತರು ಆಳವಾದ ಅಧ್ಯಯನ ನಡೆಸಬೇಕು. ಸುದ್ದಿ ಬರೆಯುವವರಷ್ಟೇ ಅಲ್ಲ, ಸುದ್ದಿಯನ್ನು ಅರ್ಥೈಸುವ ಸಾಮರ್ಥ್ಯವೂ ಪತ್ರಕರ್ತರಲ್ಲಿ ಇರಬೇಕು. ಕರ್ತವ್ಯನಿಷ್ಠೆ ಮತ್ತು ಜವಾಬ್ದಾರಿಯುತ ಮನೋಭಾವವೇ ಉತ್ತಮ ಪತ್ರಿಕೋದ್ಯಮದ ಅಡಿಪಾಯ ಎಂದು ಹೇಳಿದರು.
ಹೊಸ ತಂತ್ರಜ್ಞಾನ, ಕಾನೂನು, ಸಾಮಾಜಿಕ ಹಾಗೂ ರಾಜಕೀಯ ಬೆಳವಣಿಗೆಗಳ ಬಗ್ಗೆ ನಿರಂತರ ಅಧ್ಯಯನ ನಡೆಸಿದಾಗ ಮಾತ್ರ ಗುಣಮಟ್ಟದ ಪತ್ರಿಕೋದ್ಯಮ ಸಾಧ್ಯವಾಗುತ್ತದೆ. ಕನ್ನಡ ಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದಾಗಿದ್ದು, ವಿದ್ಯಾರ್ಥಿಗಳು ಸಂಪಾದಕೀಯ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಪಾಟೀಲ್ ಮಾತನಾಡಿ, ಸರ್ಕಾರದ ಯೋಜನೆಗಳು ಮತ್ತು ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುವಲ್ಲಿ ಪತ್ರಿಕೆಗಳು ಕನ್ನಡಿಯಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಘವೀರಸಿಂಗ್ ಠಾಕೂರ್, ಶಿವಾನಂದ್ ಮೊಕ್ತೆದಾರ್, ಸುರೇಶ್ ಚನ್ನಶೆಟ್ಟಿ ಹಾಗೂ ಬಾಲಾಜಿ ಅಮರವಾಡಿ ಉಪಸ್ಥಿತರಿದ್ದು ಮಾತನಾಡಿದರು.
ಈ ವೇಳೆ ತಾಲ್ಲೂಕಿನ ಎಲ್ಲ ಪತ್ರಕರ್ತರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ್ ದೇಶಮುಖ, ಶರಣಪ್ಪ ಚಿಟಮೆ, ಮನ್ಮಥ್ ಸ್ವಾಮಿ, ಗುರುನಾಥ್ ದೇಶಮುಖ, ಶಿವರಾಜ್ ಅಲ್ಮಾಜೆ, ವೀರೇಶ್ ಅಲ್ಮಾಜೆ, ಅಮರೇಶ್ ಚಿದ್ರೆ, ಮಲ್ಲಪ್ಪಗೌಡ, ಅಮರಸ್ವಾಮಿ ಸ್ಥಾವರಮಠ್, ಆನಂದ್ ದ್ಯಾಡೆ, ಅನಿಲ್ ಮೇತ್ರೆ, ರಾಚಯ್ಯ ಸ್ವಾಮಿ, ಚನ್ನಪ್ಪ ಮುಕ್ತೆದಾರ್, ರತಿಕಾಂತ್, ಅಂಬಾದಾಸ್ ನಳಗೆ, ಶಿವಕುಮಾರ್ ಸಾದುರೆ, ಅಲಿಂಪಾಶಾ ಹಾಗೂ ಸೂರ್ಯಕಾಂತ್ ಸೇರಿದಂತೆ ಪತ್ರಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.






