ಔರಾದ್ | ಕುಡಿಯುವ ನೀರಿಗಾಗಿ 2.5 ಕೋಟಿ ಅನುದಾನಕ್ಕೆ ಶಾಸಕ ಪ್ರಭು ಚವ್ಹಾಣ ಆಗ್ರಹ

ಔರಾದ್ : ಪಟ್ಟಣದಲ್ಲಿ ತಲೆದೋರಿರುವ ತೀವ್ರ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ತಕ್ಷಣವೇ 2.5 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು ಎಂದು ಶಾಸಕ ಪ್ರಭು ಚವ್ಹಾಣ ಅವರು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರನ್ನು ಒತ್ತಾಯಿಸಿದರು.
ತಾಲೂಕಿನ ತೇಗಂಪೂರ್ ಸಣ್ಣ ನೀರಾವರಿ ಇಲಾಖೆಯ ಕೆರೆಗೆ ಸಚಿವ ಈಶ್ವರ್ ಖಂಡ್ರೆ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಮನವಿ ಪತ್ರ ಸಲ್ಲಿಸಿ, ಔರಾದ್ ಪಟ್ಟಣಕ್ಕೆ ಈ ಹಿಂದೆ ತೇಗಂಪೂರ್ ಕೆರೆಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ, ಹಾಲಹಳ್ಳಿಯಿಂದ ನೀರು ಪೂರೈಕೆ ಆರಂಭವಾದ ನಂತರ ತೇಗಂಪೂರ್ ಕೆರೆ ನೀರು ಸರಬರಾಜು ಯೋಜನೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಮೋಟಾರ್‌ಗಳು, ಪೈಪ್‌ಲೈನ್ ಸೇರಿದಂತೆ ಸಂಪೂರ್ಣ ವ್ಯವಸ್ಥೆ ಹಾಳಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಮಾಂಜ್ರಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಅಲ್ಲಿಂದ ಪಟ್ಟಣಕ್ಕೆ ನೀರು ಸರಬರಾಜು ಸ್ಥಗಿತಗೊಂಡಿದೆ. ಇದರಿಂದಾಗಿ ಜನರು ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಔರಾದ್ ಪಟ್ಟಣದ ಜನಸಂಖ್ಯೆಗೆ ಅನುಗುಣವಾಗಿ ಸಮರ್ಪಕ ನೀರು ಪೂರೈಸಲು ತೇಗಂಪೂರ್ ಕೆರೆಯಲ್ಲಿ ಅಗತ್ಯ ಸಾಮರ್ಥ್ಯದ ಮೋಟಾರ್‌ಗಳನ್ನು ಅಳವಡಿಸಿ, ಔರಾದ್ ಪಟ್ಟಣದವರೆಗೆ ಹೊಸ ಪೈಪ್‌ಲೈನ್ ವ್ಯವಸ್ಥೆ ಕಲ್ಪಿಸಬೇಕಿದೆ. ಈ ಕಾಮಗಾರಿಗಳಿಗೆ ಅಂದಾಜು 2.5 ಕೋಟಿ ರೂ. ಅನುದಾನ ಅಗತ್ಯವಿದ್ದು, ಕೂಡಲೇ ಅನುದಾನ ಒದಗಿಸುವಂತೆ ಅವರು ಮನವಿ ಮಾಡಿದರು.
ಶಾಸಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಕೆಯಾಗಿರುವ 30 ಲಕ್ಷ ರೂ. ಅನುದಾನದ ಪ್ರಸ್ತಾವನೆಗೆ ಮಂಜೂರಾತಿ ನೀಡುವಂತೆ ಮತ್ತು ತಮ್ಮ ಇಲಾಖೆಯಿಂದ 50 ಲಕ್ಷ ರೂ. ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮೌಖಿಕ ನಿರ್ದೇಶನ ನೀಡಿದರು. ಅಲ್ಲದೆ, ಔರಾದ್ ಪಟ್ಟಣದ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂದಿನ ಮೂರು ದಿನಗಳೊಳಗಾಗಿ ತಾತ್ಕಾಲಿಕ ಪರಿಹಾರ ಕ್ರಮ ಕೈಗೊಂಡು ನೀರು ಪೂರೈಕೆ ಮಾಡುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.






