Aurad | ‘ನನ್ನ ಸ್ವತ್ತು ನನ್ನ ಹಕ್ಕು’ ಅಭಿಯಾನಕ್ಕೆ ಚಾಲನೆ

ಔರಾದ್: ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಮನೆಗಳ ಮಾಲೀಕರು ತಮ್ಮ ಆಸ್ತಿ ಸಂಬಂಧಿತ ದಾಖಲೆಗಳನ್ನು ಗ್ರಾಮ ಪಂಚಾಯತಿಗೆ ಸಲ್ಲಿಸಿ, ಆಸ್ತಿಗಳ ಡಿಜಿಟಲೀಕರಣ ಮಾಡಿಸಿಕೊಂಡು ಇ-ಸ್ವತ್ತು ಖಾತೆ ಪಡೆಯಬೇಕು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಪಾಟೀಲ್ ಕರೆ ನೀಡಿದರು.
ತಾಲೂಕಿನ ಸಂತಪೂರ್ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮಸ್ಥರಿಗೆ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ಇ-ಸ್ವತ್ತು ಪಡೆಯಲು ಅನುಕೂಲವಾಗುವ ಉದ್ದೇಶದಿಂದ ಹಮ್ಮಿಕೊಂಡಿದ್ದ ‘ನನ್ನ ಸ್ವತ್ತು ನನ್ನ ಹಕ್ಕು’ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಅಭಿಯಾನದ ಮೊದಲ ದಿನವೇ ಒಟ್ಟು 47 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 9 ಮಂದಿಗೆ ಇ-ಸ್ವತ್ತು ದಾಖಲೆಗಳನ್ನು ವಿತರಿಸಲಾಗಿದೆ. ಉಳಿದ ಅರ್ಜಿಗಳ ಪರಿಶೀಲನೆ ಹಾಗೂ ಪ್ರಕ್ರಿಯೆ ಪ್ರಗತಿಯಲ್ಲಿದೆ. ಗ್ರಾಮಸ್ಥರು ಈ ಅಭಿಯಾನದ ಸದುಪಯೋಗ ಪಡೆದು ತಮ್ಮ ಮನೆಗಳ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ಇ-ಸ್ವತ್ತು ಖಾತೆ ಪಡೆಯಬೇಕು ಎಂದು ಮನವಿ ಮಾಡಿದರು.
ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆ ಮಾತನಾಡಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಈಗಾಗಲೇ ಮನೆ-ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಇ-ಸ್ವತ್ತು ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್, ಅಮರ್ ಬಿರಾದಾರ್, ಶಂಕರ್ ಸ್ವಾಮಿ, ರಾಜಕುಮಾರ್, ನಸೀರೊದ್ದಿನ್, ಗುಂಡಪ್ಪ, ಇರ್ಫಾನ್, ಕುಂದನಾಬಾಯಿ, ಶೋಭಾವತಿ ಹಾಗೂ ಸುಮಿತ್ರಾದೇವಿ ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು.






