ಸೆ.30 ರೊಳಗೆ ಔರಾದ್ ಬರಪೀಡಿತ ತಾಲೂಕು ಘೋಷಣೆ : ಭೀಮಸೇನರಾವ್ ಶಿಂಧೆ ವಿಶ್ವಾಸ

ಔರಾದ್ : ಔರಾದ್ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವ ಪ್ರಕ್ರಿಯೆ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದ್ದು, ಸೆಪ್ಟೆಂಬರ್ 30ರೊಳಗೆ ತಾಲೂಕು ಕೂಡ ಬರಪೀಡಿತ ಪ್ರದೇಶವಾಗಿ ಘೋಷಣೆಯಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಡಾ. ಭೀಮಸೇನರಾವ್ ಶಿಂಧೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಪ್ರಸಕ್ತ ವರ್ಷ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಔರಾದ್ ಕ್ಷೇತ್ರದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ರೈತರು ಆತಂಕಪಡುವ ಅಗತ್ಯವಿಲ್ಲ. ಬರ ಘೋಷಣೆ ಸೇರಿದಂತೆ ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸರ್ಕಾರದ ಮಟ್ಟದಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಔರಾದ್ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಅಲ್ಲದೆ, ಕಂದಾಯ ಇಲಾಖೆ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ ಅವರನ್ನು ಭೇಟಿ ಮಾಡಿ ಮಳೆ ಕೊರತೆ, ಬರ ಪರಿಸ್ಥಿತಿ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿವರವಾಗಿ ಚರ್ಚಿಸಲಾಗಿದೆ ಎಂದು ಹೇಳಿದ್ದಾರೆ.
ಬರಪೀಡಿತ ಪ್ರದೇಶಗಳ ಘೋಷಣೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ತಿಂಗಳ ಅಂತ್ಯದೊಳಗೆ ಔರಾದ್ ತಾಲೂಕನ್ನೂ ಬರಪೀಡಿತ ಪ್ರದೇಶವೆಂದು ಘೋಷಿಸುವ ವಿಶ್ವಾಸವನ್ನು ಕಂದಾಯ ಇಲಾಖೆ ಕಾರ್ಯದರ್ಶಿಗಳು ವ್ಯಕ್ತಪಡಿಸಿದ್ದಾರೆ ಎಂದು ಶಿಂಧೆ ತಿಳಿಸಿದ್ದಾರೆ.
ಈಗಾಗಲೇ ಔರಾದ್ ಕ್ಷೇತ್ರದ ಕಮಲನಗರ್ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿರುವ ಸರ್ಕಾರಕ್ಕೆ ಕ್ಷೇತ್ರದ ಜನರು ಹಾಗೂ ರೈತರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿರುವ ಅವರು, ಔರಾದ್ ತಾಲೂಕಿಗೂ ಶೀಘ್ರವೇ ಬರ ಘೋಷಣೆಯಾಗುವ ಮೂಲಕ ರೈತರಿಗೆ ಸರ್ಕಾರದ ಪರಿಹಾರ ಮತ್ತು ನೆರವು ದೊರೆಯುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.






