Aurad | ವಿವಿಧೆಡೆ ಜಿಪಂ ಸಿಇಒ ದಿಢೀರ್ ಭೇಟಿ : ವಿವಿಧ ಕಾಮಗಾರಿಗಳ ಪರಿಶೀಲನೆ

ಔರಾದ್: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಅವರು ಸೋಮವಾರ ತಾಲೂಕಿನ ವಿವಿಧೆಡೆ ಧಿಡೀರ್ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸರ್ಕಾರಿ ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು.
ತಾಲೂಕಿನ ಬಾದಲಗಾಂವ್ ಗ್ರಾಮಕ್ಕೆ ಭೇಟಿ ನೀಡಿದ ಅವರು, ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಯನ್ನು ವೀಕ್ಷಿಸಿ ಕಾಮಗಾರಿಯ ಪ್ರಗತಿ, ಅನುಷ್ಠಾನ ಮತ್ತು ಗುಣಮಟ್ಟದ ಕುರಿತು ಪರಿಶೀಲನೆ ನಡೆಸಿದರು. ಸಂಬಂಧಪಟ್ಟ ಅಧಿಕಾರಿಗಳಿಂದ ಯೋಜನೆಗೆ ಸಂಬಂಧಿಸಿದ ಮಾಹಿತಿ ಪಡೆದು ಅಗತ್ಯ ಸೂಚನೆಗಳನ್ನು ನೀಡಿದರು.
ಬಳಿಕ ವನಮಾರಪಳ್ಳಿ ಗ್ರಾಮದ ಕಿತ್ತೂರರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿನಿಯರಿಗೆ ಕಲ್ಪಿಸಲಾಗಿರುವ ವಸತಿ, ಸ್ವಚ್ಛತೆ, ಕುಡಿಯುವ ನೀರು, ಆಹಾರ ಹಾಗೂ ಇತರ ಮೂಲಸೌಕರ್ಯಗಳ ಪರಿಶೀಲನೆ ನಡೆಸಿದರು. ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳು ಮತ್ತು ಅಗತ್ಯತೆಗಳ ಕುರಿತು ಮಾಹಿತಿ ಪಡೆದು, ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವಂತೆ ಪ್ರಾಂಶುಪಾಲರಿಗೆ ಸೂಚಿಸಿದರು.
ನಂತರ ಔರಾದ್ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಸಿಇಒ, ಆಸ್ಪತ್ರೆಯ ಸ್ವಚ್ಛತೆ, ಮೂಲಸೌಕರ್ಯ ಮತ್ತು ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ಆರೋಗ್ಯ ಸೇವೆಗಳ ಕುರಿತು ಪರಿಶೀಲನೆ ನಡೆಸಿದರು. ವಿವಿಧ ವಿಭಾಗಗಳ ಕಾರ್ಯನಿರ್ವಹಣೆ ಕುರಿತು ಸಿಬ್ಬಂದಿಯಿಂದ ಮಾಹಿತಿ ಪಡೆದು, ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರೆಯುವಂತೆ ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ನಡೆಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಪಾಟೀಲ್, ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆ, ತಾಂತ್ರಿಕ ಸಂಯೋಜಕ ಆನಂದ್ ಕಾಳಗಾಪೂರೆ, ತಾಂತ್ರಿಕ ಸಹಾಯಕ ಶರಣಪ್ಪ, ಸಂದೀಪ್ ಕಳ್ಸೆ, ಶಿವಾಜಿ ಪವಾರ್, ಪರಮೇಶ್ವರ್, ಐಇಸಿ ಸಂಯೋಜಕ ಅಂಬಾದಾಸ್ ಪಾಟೀಲ್ ಹಾಗೂ ಅನುಷ್ಠಾನ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.






