Basavakalyan | ಕಾರು ಢಿಕ್ಕಿ ಹೊಡೆದು 15 ಕುರಿಗಳು ಸಾವು

ಬಸವಕಲ್ಯಾಣ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ 65ರ ಹತ್ತಿರವಿರುವ ತಡೋಳಾ ಗ್ರಾಮದ ಹೊರವಲಯದಲ್ಲಿ ಸೋಮವಾರ ಸಂಜೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮವಾಗಿ 15 ಕುರಿಗಳು ಸಾವನ್ನಪ್ಪಿದ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆ ಮೂಲದ ಜ್ಯೋತಿಬಾ ಲೋಖಂಡೆ ಎಂಬುವವರಿಗೆ ಈ ಕುರಿಗಳು ಸೇರಿವೆ. ಕುರಿಗಾಯಿಗಳು ಸುಮಾರು 700 ಕುರಿಗಳನ್ನು ಹುಮನಾಬಾದ್ ತಾಲೂಕು ವ್ಯಾಪ್ತಿ ಪ್ರದೇಶದಲ್ಲಿ ಮೇಯಿಸುತ್ತಿದ್ದರು. ಸೋಮವಾರ ಸಂಜೆ ಕುರಿಗಳನ್ನು ಮೇಯಿಸಿಕೊಂಡು ರಸ್ತೆ ದಾಟುವ ವೇಳೆ ಹುಮನಾಬಾದ್ ಕಡೆಯಿಂದ ವೇಗವಾಗಿ ಬಂದ ಕಾರೊಂದು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ವೇಳೆ 12 ಕುರಿ, 3 ಕುರಿಮರಿಗಳು ಸ್ಥಳದಲ್ಲಿಯೇ ಮೃತಪಟ್ಟಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಢಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು, ಪಶು ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ತಿಳಿದು ಬಂದಿದೆ.
Next Story




