Basavakalyan | ಕೆಟ್ಟು ನಿಂತಿದ್ದ ಲಾರಿಗೆ ಗುದ್ದಿದ ಕಾರು; ಚಾಲಕ ಸ್ಥಳದಲ್ಲೇ ಮೃತ್ಯು

ಬೀದರ್ : ಕೆಟ್ಟು ನಿಂತದ್ದ ಲಾರಿಗೆ ವೇಗವಾಗಿ ಬಂದ ಕಾರೊಂದು ಗುದ್ದಿದೆ. ನಂತರ ಆ ಕಾರಿನ ಹಿಂಬದಿಯಲ್ಲಿ ಬಂದಿದ್ದ ಕಂಟೇನರ್ ಲಾರಿಯೊಂದು ಆ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬಸವಕಲ್ಯಾಣ ತಾಲೂಕಿನ ರಾಜೇಶ್ವರ್ ಗ್ರಾಮ ಬಳಿಯ NH-65 ಹೆದ್ದಾರಿಯಲ್ಲಿ ನಡೆದಿದೆ.
ಚಿಟಗುಪ್ಪಾ ತಾಲೂಕಿನ ಇಟಗಾ ಗ್ರಾಮದ ನಿವಾಸಿಯಾದ ಜೈಭೀಮ್ (36) ಮೃತಪಟ್ಟ ಕಾರು ಚಾಲಕನಾಗಿದ್ದಾನೆ.
ಜೈಭೀಮ್ ಕಾರಿನಲ್ಲಿ ಇಟಗಾ ಗ್ರಾಮದಿಂದ ಬಸವಕಲ್ಯಾಣ ತಾಲೂಕಿನ ಇಲ್ಯಾಳ ಗ್ರಾಮಕ್ಕೆ ಹೋಗುತಿದ್ದರು ಎನ್ನಲಾಗಿದೆ. ರಸ್ತೆ ಮಧ್ಯದಲ್ಲಿ ಲಾರಿಯೊಂದು ಕೆಟ್ಟು ನಿಂತಿದ್ದು, ಲಾರಿ ಚಾಲಕ ಮತ್ತು ಕ್ಲೀನರ್ ಆ ಲಾರಿಯನ್ನು ರಸ್ತೆ ಮೇಲೆಯೇ ಒಂದು ಕಡೆ ನಿಲ್ಲಿಸಿ ಲಾರಿಯ ಸಮಸ್ಯೆಯನ್ನು ನೋಡುತ್ತಿದ್ದರು. ಅಷ್ಟರಲ್ಲಿ ವೇಗವಾಗಿ ಬಂದ ಕಾರು, ಚಾಲಕನ ನಿಯಂತ್ರಣ ತಪ್ಪಿ ಲಾರಿ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಅದೇ ವೇಳೆ ಕಾರಿನ ಹಿಂದೆಯೇ ವೇಗವಾಗಿ ಬಂದ ಕಂಟೇನರ್ ಲಾರಿಯು ಆ ಕಾರಿನ ಹಿಂಬದಿಯಿಂದ ಗುದ್ದಿದೆ. ಎರಡು ಲಾರಿಗಳ ಮಧ್ಯ ಸಿಲುಕಿರುವ ಕಾರು ಸಂಪೂರ್ಣವಾಗಿ ನುಜ್ಜು ಗುಜ್ಜಾಗಿದ್ದು, ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಹುಮನಾಬಾದ್ ಡಿವೈಎಸ್ಪಿ ಮುಡೋಳಪ್ಪ ಹಾಗೂ ಬಸವಕಲ್ಯಾಣ ಸಿಪಿಐ ಅಲಿಸಾಬ್ ಹಾಗೂ ಹುಮನಾಬಾದ್ ಸಿಪಿಐ ಸಂತೋಷ ತಟ್ಟೆಪಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.





