Basavakalyan | ಹಡಪದ ಅಪ್ಪಣ್ಣನವರ ಗವಿ ಅಭಿವೃದ್ಧಿಗೆ ಸಿಎಂಗೆ ಮನವಿ

ಬಸವಕಲ್ಯಾಣ: ವಿಶ್ವಗುರು ಬಸವಣ್ಣನವರ ಅರಿವಿನ ಮನೆ ಪಕ್ಕದಲ್ಲಿರುವ ಶಿವಶರಣ ಹಡಪದ ಅಪ್ಪಣ್ಣನವರ ಗವಿಯನ್ನು ಅಭಿವೃದ್ಧಿಪಡಿಸಿ, ಅಲ್ಲಿ ಮೂರ್ತಿ ಹಾಗೂ ನಾಮಫಲಕ ಸ್ಥಾಪಿಸಬೇಕು ಎಂದು ಹಡಪದ ಸಮಾಜದ ಮುಖಂಡರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
2027ರಲ್ಲಿ ಉದ್ಘಾಟನೆಗೊಳ್ಳಲಿರುವ ಜಗತ್ತಿನ ಪ್ರಥಮ ಸಂಸತ್ತೆಂದು ಪರಿಗಣಿಸಲ್ಪಡುವ ಅನುಭವ ಮಂಟಪದ ಹಿನ್ನೆಲೆಯಲ್ಲಿ, ಅದರ ಮೂಲ ಸಂಕೇತವಾದ ಅರಿವಿನ ಮನೆ ಪಕ್ಕದಲ್ಲಿರುವ ಹಡಪದ ಅಪ್ಪಣ್ಣನವರ ಗವಿಗೆ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಆದ್ದರಿಂದ ಗವಿಯನ್ನು ಅಭಿವೃದ್ಧಿಪಡಿಸಿ, ಮೂರ್ತಿ ಹಾಗೂ ನಾಮಫಲಕ ಅಳವಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಹಡಪದ ಅಪ್ಪಣ್ಣನವರು ಅನುಭವ ಮಂಟಪದ ಪ್ರಧಾನ ಕಾರ್ಯದರ್ಶಿಯಾಗಿದ್ದು, ಬಸವಣ್ಣನವರ ಆಪ್ತ ಸಹಾಯಕ ಹಾಗೂ ಮಾರ್ಗದರ್ಶಕರಾಗಿದ್ದರು. ಶೋಷಿತ ಸಮುದಾಯಗಳನ್ನು ಒಗ್ಗೂಡಿಸಿ ಜಾತಿ, ವರ್ಗ ಹಾಗೂ ವರ್ಣರಹಿತ ಕಲ್ಯಾಣ ರಾಜ್ಯ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದ್ದರು. ಅವರ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಗವಿಯನ್ನು ಐತಿಹಾಸಿಕ ತಾಣವಾಗಿ ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಲಾಗಿದೆ.
ಇದೇ ವೇಳೆ, ಹಡಪದ ಅಪ್ಪಣ್ಣ ಅಭಿವೃದ್ಧಿ ನಿಗಮಕ್ಕೆ ವಾರ್ಷಿಕ ಬಜೆಟ್‌ನಲ್ಲಿ 100 ಕೋಟಿ ರೂ. ಅನುದಾನ ಮೀಸಲಿಡಬೇಕು, “ಹಜಾಮ” ಎಂಬ ನಿಷೇಧಿತ ಪದ ಬಳಕೆಯ ವಿರುದ್ಧ ಕಠಿಣ ಕ್ರಮ ಕೈಗೊಂಡು ದೌರ್ಜನ್ಯ ತಡೆ ಕಾಯ್ದೆ ಜಾರಿಗೊಳಿಸಬೇಕು ಹಾಗೂ ನೂತನ ಅನುಭವ ಮಂಟಪದ ಮುಖ್ಯ ಪ್ರವೇಶ ದ್ವಾರಕ್ಕೆ “ಹಡಪದ ಅಪ್ಪಣ್ಣ ಮಹಾದ್ವಾರ” ಎಂದು ನಾಮಕರಣ ಮಾಡಬೇಕು ಎಂದು ಆಗ್ರಹಿಸಲಾಗಿದೆ.
ಈ ಸಂಧರ್ಭದಲ್ಲಿ ಈರಣ್ಣ ಸಿ. ಹಡಪದ ,ದತ್ತಾತ್ರಿ ಜಿ. ಬಾಂದೆಕರ್, ರಾಚಪ್ಪ ಹಡಪದ, ಜಗದೀಶ್ ನೆಲ್ವಾಡಕರ್, ದತ್ತಾತ್ರಿ ಸಿ.ಮೂಲಗೆ ಹಾಗೂ ಶಿವಶಂಕರ್ ಹಡಪದ ಸೇರಿದಂತೆ ಹಲವರಿದ್ದರು.






