Basavakalyan | ಕಿಟ್ಟಾ ಗ್ರಾಮದ 20 ಬಡ ಕುಟುಂಬಗಳಿಗೆ ನಿವೇಶನದ ಹಕ್ಕು ಒದಗಿಸಲು ಬಿಎಸ್‌ಪಿ ಆಗ್ರಹ

ಬಸವಕಲ್ಯಾಣ: ತಾಲೂಕಿನ ಕಿಟ್ಟಾ ಗ್ರಾಮದ ಸರ್ವೆ ನಂ. 249ರಲ್ಲಿ ಸುಮಾರು 20 ಬಡ ಕುಟುಂಬಗಳಿಗೆ ನಿವೇಶನಕ್ಕಾಗಿ ಹಕ್ಕುಪತ್ರಗಳನ್ನು ನೀಡಲಾಗಿದೆ. ಆದರೆ, ಹಕ್ಕುಪತ್ರ ಪಡೆದು ಹಲವು ವರ್ಷಗಳು ಕಳೆದಿದ್ದರೂ ಸಂಬಂಧಪಟ್ಟ ಫಲಾನುಭವಿಗಳಿಗೆ ನಿವೇಶನದ ಸಂಪೂರ್ಣ ಹಕ್ಕು ಹಾಗೂ ಅಗತ್ಯ ಸೌಲಭ್ಯಗಳು ದೊರೆತಿಲ್ಲ. ಕೂಡಲೇ ಫಲಾನುಭವಿಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ವತಿಯಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಈ ಕುರಿತು ತಹಶೀಲ್ದಾರ್‌ಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಫಲಾನುಭವಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಮತ್ತು ದೂರುಗಳನ್ನು ಸಲ್ಲಿಸಿದ್ದರೂ, ಸಮಸ್ಯೆಗೆ ಇದುವರೆಗೆ ಸೂಕ್ತ ಪರಿಹಾರ ದೊರೆತಿಲ್ಲ ಎಂದು ಆರೋಪಿಸಲಾಗಿದೆ.
ಬಡ ಕುಟುಂಬಗಳಿಗೆ ನೀಡಲಾಗಿರುವ ಹಕ್ಕುಪತ್ರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ, ಅರ್ಹ ಫಲಾನುಭವಿಗಳಿಗೆ ಕಾನೂನುಬದ್ಧವಾಗಿ ದೊರೆಯಬೇಕಾದ ಹಕ್ಕು ಮತ್ತು ನ್ಯಾಯವನ್ನು ಶೀಘ್ರವಾಗಿ ಒದಗಿಸಬೇಕು. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಫಲಾನುಭವಿಗಳ ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ನಿಗದಿತ ಅವಧಿಯಲ್ಲಿ ಫಲಾನುಭವಿಗಳಿಗೆ ನ್ಯಾಯ ದೊರಕದಿದ್ದರೆ ಬಹುಜನ ಸಮಾಜ ಪಕ್ಷದ ವತಿಯಿಂದ ತಹಶೀಲ್ದಾರ್ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಶಂಕರ್ ಫುಲೆ, ದತ್ತು ಸುಠಾಣೆ, ಮಕ್ಬುಲ್ ಸಾಬ್, ರಮೇಶ್ ರಾಠೋಡ್, ಸಚಿನ್ ಕಾಂಬಳೆ, ರವಿ ಉದಾತೆ, ಮಹಾದೇವ್ ಗಾಯಕ್ವಾಡ್, ಮಸ್ತಾನಸಾಬ್ ಚಿಟ್ಟಾ, ರಾಹುಲ್ ವಾಗಮಾರೆ, ಪ್ರಶಾಂತ್ ಗುಡ್ಡೆ, ಮಾರುತಿ ಮೇಕಲೆ, ಜಾವೀದ್ ಲದಾಫ್ ಹಾಗೂ ರಮೇಶ್ ಮಂಠಾಳಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.






