ಬಸವ ಕಲ್ಯಾಣ: ಕಾರು- ಕೆಕೆಆರ್ ಟಿಸಿ ಬಸ್ ಮಧ್ಯೆ ಅಪಘಾತ: ದಂಪತಿ ಮೃತ್ಯು; ನಾಲ್ವರು ಗಂಭೀರ

ಬಸವ ಕಲ್ಯಾಣ: ಕಾರು ಮತ್ತು ಕೆಕೆಆರ್ ಟಿಸಿ ಬಸ್ ನಡುವೆ ಢಿಕ್ಕಿ ಸಂಭವಿಸಿ ದಂಪತಿ ಸ್ಥಳದಲ್ಲೇ ಮೃತಪಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಸಸ್ತಾಪುರ್ ಬಾಂಗ್ಲಾದ ಎನ್.ಎಚ್.-65ರ ಮುಡಬಿ ಕ್ರಾಸ್ ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ.
ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ನಾರಾಯಣಖೇಡ್ ತಾಲೂಕಿನ ಮಣ್ಣೂರ್ ಗ್ರಾಮದ ಶಿವಕುಮಾರ್ (58) ಹಾಗೂ ಅವರ ಪತ್ನಿ ಸಂಘಮಾನೆ (50) ಮೃತಪಟ್ಟವರು.
ಮಹಾರಾಷ್ಟ್ರದ ತುಳಜಾಪುದ ಅಂಬಾ ಭವಾನಿ ದರ್ಶನಕ್ಕೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ನಾರಾಯಣಖೇಡ್ ತಾಲೂಕಿನ ಮಣ್ಣೂರ್ ಗ್ರಾಮದ ಕುಟುಂಬಸ್ಥರು ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಎನ್ಎಚ್-65 ಮೇಲಿರುವ ಮುಡಬಿ ಕ್ರಾಸ್ ತಿರುವಿನಲ್ಲಿ ಬಸವಕಲ್ಯಾಣದಿಂದ ಕಲಬುರಗಿಗೆ ತೆರಳುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
.ಕಾರಿನಲ್ಲಿದ್ದ ಮೃತ ದಂಪತಿಯ ಇಬ್ಬರು ಪುತ್ರರು, ಸೊಸೆ ಹಾಗೂ ಒಬ್ಬ ಬಾಲಕನಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಬಸವಕಲ್ಯಾಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.
ಈ ಕುರಿತು ಬಸವಕಲ್ಯಾಣ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




