Basavakalyan | ಡಾ.ಬಿ.ಆರ್.ಅಂಬೇಡ್ಕರ್ ಸಂಜೀವಿನಿ ಮಹಿಳಾ ಒಕ್ಕೂಟದ ಹಣ ದುರ್ಬಳಕೆ ಆರೊಪ : ಪ್ರಕರಣ ದಾಖಲು

ಬಸವಕಲ್ಯಾಣ: ತಾಲೂಕಿನ ಲಾಡವಂತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಾ. ಬಿ.ಆರ್. ಅಂಬೇಡ್ಕರ್ ಸಂಜೀವಿನಿ ಮಹಿಳಾ ಒಕ್ಕೂಟದಲ್ಲಿ ಹಣ ದುರ್ಬಳಕೆ ನಡೆದಿರುವ ಆರೋಪ ಕೇಳಿಬಂದಿದ್ದು, ಏಪ್ರಿಲ್ 7ರಂದು ಪ್ರಕರಣ ದಾಖಲಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಈ ಕುರಿತು ಬಸವಕಲ್ಯಾಣ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಸುಲ್ಫಿ ಅವರು ದೂರು ನೀಡಿದ್ದಾರೆ. ಲಾಡವಂತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಿಳಾ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರ್ತಿ ಅನಿತಾ ಭಾಕನಾಳ ಅವರು ಎನ್‌ಆರ್‌ಎಲ್‌ಎಂ ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ. ಬಿ.ಆರ್. ಅಂಬೇಡ್ಕರ್ ಸಂಜೀವಿನಿ ಮಹಿಳಾ ಒಕ್ಕೂಟದ 19 ಲಕ್ಷ 60 ಸಾವಿರ ರೂ. ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮಹಿಳಾ ಸ್ವಸಹಾಯ ಸಂಘಗಳಿಗೆ ಉಪಯೋಗವಾಗಬೇಕಿದ್ದ ಹಣವನ್ನು ದುರುಪಯೋಗಪಡಿಸಿಕೊಂಡಿರುವುದಾಗಿ ತಿಳಿಸಲಾಗಿದೆ.
ದೂರಿನೊಂದಿಗೆ 19.60 ಲಕ್ಷ ರೂ. ದುರ್ಬಳಕೆಗೆ ಸಂಬಂಧಿಸಿದ ಸಮಗ್ರ ಪರಿಶೀಲನಾ ವರದಿಯನ್ನೂ ಸಲ್ಲಿಸಲಾಗಿದ್ದು, ಅನಿತಾ ಭಾಕನಾಳ ವಿರುದ್ಧ ಹಣ ವಸೂಲಾತಿಗೆ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಕ್ರಮದ ವರದಿಯನ್ನು ಜಿಲ್ಲಾ ಪಂಚಾಯತ್ ಕಚೇರಿಗೆ ಸಲ್ಲಿಸಬೇಕು ಎಂದು ಮನವಿ ಮಾಡಲಾಗಿದೆ.
ಈ ಸಂಬಂಧ ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




