Basavakalyan | ಆರೋಗ್ಯಾಧಿಕಾರಿಗಳ ಅಮಾನತು ಆದೇಶ ಹಿಂಪಡೆಯಲು ಸರ್ಕಾರಿ ನೌಕರರ ಸಂಘ ಆಗ್ರಹ

ಬಸವಕಲ್ಯಾಣ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜ್ಞಾನೇಶ್ವರ್ ನಿರಗುಡೆ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಮೈಲಾರೆ ಅವರನ್ನು ಅಮಾನತುಗೊಳಿಸಿದ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಬಸವಕಲ್ಯಾಣ ಹಾಗೂ ಹುಲಸೂರ್ ತಾಲೂಕಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ ಸಲ್ಲಿಸಿದೆ.
ಸಹಾಯಕ ಆಯುಕ್ತರ ಮೂಲಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಆಯುಕ್ತರಿಗೆ ಸಲ್ಲಿಸಿದ ಮನವಿಯಲ್ಲಿ, ಉಪವಿಭಾಗೀಯ ಆಸ್ಪತ್ರೆ ಕಟ್ಟಡ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದ ವೇಳೆ ಬ್ಯಾನರ್‌ಗೆ ಸಂಬಂಧಿಸಿದ ವಿಷಯದ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ಡಾ. ಜ್ಞಾನೇಶ್ವರ್ ನಿರಗುಡೆ ಹಾಗೂ ಡಾ. ಅಶೋಕ್ ಮೈಲಾರೆ ಅವರು ಪ್ರಾಮಾಣಿಕ, ದಕ್ಷ ಮತ್ತು ಕರ್ತವ್ಯನಿಷ್ಠ ಅಧಿಕಾರಿಗಳಾಗಿದ್ದು, ಜಿಲ್ಲೆ ಹಾಗೂ ತಾಲೂಕಿನ ಆರೋಗ್ಯ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆ. ಅವರ ಜನಪರ ಕಾರ್ಯವೈಖರಿ ಮತ್ತು ಇಲಾಖೆಗೆ ಸಲ್ಲಿಸುತ್ತಿರುವ ಸೇವೆಯನ್ನು ಅಧಿಕಾರಿಗಳು ಹಾಗೂ ನೌಕರರು ಗೌರವಿಸುತ್ತಾರೆ ಎಂದು ಸಂಘ ತಿಳಿಸಿದೆ.
ಗಣ್ಯರ ಭಾವಚಿತ್ರ ಅಳವಡಿಕೆಗೆ ಸಂಬಂಧಿಸಿದ ಲೋಪವನ್ನೇ ಆಧಾರವಾಗಿಟ್ಟುಕೊಂಡು ಅಮಾನತ್ತಿನಂತಹ ಕಠಿಣ ಕ್ರಮ ಕೈಗೊಂಡಿರುವುದು ಜಿಲ್ಲೆಯ ಅಧಿಕಾರಿಗಳು ಮತ್ತು ನೌಕರರಲ್ಲಿ ಆತಂಕ ಹಾಗೂ ಅಸಮಾಧಾನ ಮೂಡಿಸಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಪ್ರಕರಣದ ಕುರಿತು ರಾಜ್ಯ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಿ, ವಾಸ್ತವಾಂಶಗಳನ್ನು ಪರಿಶೀಲಿಸಿ ಅಮಾನತು ಆದೇಶವನ್ನು ಹಿಂಪಡೆದು ಇಬ್ಬರು ಅಧಿಕಾರಿಗಳನ್ನು ಕರ್ತವ್ಯಕ್ಕೆ ಮರು ನಿಯೋಜಿಸಬೇಕು. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಅನಗತ್ಯ ಒತ್ತಡ ಹಾಗೂ ಅನ್ಯಾಯವಾಗದಂತೆ ರಕ್ಷಣೆ ನೀಡಬೇಕು ಎಂದು ಸಂಘ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹುಲಸೂರ್ ತಾಲೂಕಾಧ್ಯಕ್ಷ ನಾಗರಾಜ್ ಹಾವಣ್ಣಾ, ಪ್ರಧಾನ ಕಾರ್ಯದರ್ಶಿ ಶಿವರಾಜ್ ಮಾಶೆಟ್ಟಿ, ಖಜಾಂಚಿ ರಾಜಕುಮಾರ್ ಶೆಟ್ಟೆಪ್ಪಾ, ರಾಜ್ಯ ಪರಿಷತ್ ಸದಸ್ಯ ಭೀಮಾಶಂಕರ್ ಆದೇಪ್ಪಾ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬಸವಕಲ್ಯಾಣ ತಾಲೂಕು ಪ್ರಧಾನ ಕಾರ್ಯದರ್ಶಿ ಅಂಬಣ್ಣಾ ಘಾಂಗ್ರೆ, ಖಜಾಂಚಿ ಸುಭಾಷ್ ಕಾಮಶೆಟ್ಟಿ, ಶಿವಕುಮಾರ್ ಜಡಗೆ, ಪ್ರಕಾಶ್ ವಾಡೆಕರ್, ಹರ್ಷವರ್ಧನ್, ಹಿರಿಯ ವೈದ್ಯಾಧಿಕಾರಿ ಡಾ.ಪ್ರತಾಪ್ ಬಿರಾದರ್, ಡಾ.ಅಭಿಲಾಶ್ ಕನಕ, ಡಾ.ಆನಂದ್ ದಂಡೆ, ಬಾ.ಶಶಿಕಾಂತ್ ಕನ್ನಾಡೆ ಡಾ.ರವಿಶಂಕರ್ ಖಂಡ್ರೆ, ಡಾ.ಅಕ್ಕಮಹಾದೇವಿ ಗಡ್ಡೆ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಅಶ್ವಿನಿ ಘಾಳೆ ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಹಂತದ ಸಿಬ್ಬಂದಿ ವರ್ಗದವರು ಹಾಗೂ ಸರ್ಕಾರಿ ನೌಕರರರು ಹಾಜರಿದ್ದರು.






