Basavakalyan | ಬಸವಣ್ಣನ ಹೆಸರಲ್ಲಿ ಸಮಾಜದಲ್ಲಿ ಒಡಕು ಮೂಡಿಸುವುದು ಸರಿಯಲ್ಲ: ರಂಭಾಪುರಿ ಜಗದ್ಗುರು

ಬಸವಕಲ್ಯಾಣ: ಬಸವಣ್ಣನವರ ಹೆಸರಿನಲ್ಲಿ ಹಿಂದೂ ಧರ್ಮದ ಸಂಸ್ಕೃತಿಗೆ ಚ್ಯುತಿ ತರುವ ಹಾಗೂ ಸಮಾಜದಲ್ಲಿ ವೈಮನಸ್ಸು ಮೂಡಿಸುವ ಪ್ರಯತ್ನಗಳನ್ನು ಒಪ್ಪಲಾಗುವುದಿಲ್ಲ ಎಂದು ರಂಭಾಪುರಿ ಜಗದ್ಗುರು ಹೇಳಿದ್ದಾರೆ.
ತಡೋಳಾ ಆಶ್ರಮದಲ್ಲಿ ಮಂಗಳವಾರ ಬಸವಾದಿ ಶಿವಶರಣರ ಹಿಂದೂ ಸಮಾವೇಶದ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಬಸವಣ್ಣನವರ ಹೆಸರಿನಲ್ಲಿ ಕೆಲ ಮಠಾಧೀಶರು ಸಮಾಜದಲ್ಲಿ ಒಡಕು ಮತ್ತು ಭಿನ್ನಾಭಿಪ್ರಾಯಗಳನ್ನು ಹುಟ್ಟುಹಾಕುವ ಕೆಲಸ ಮಾಡುತ್ತಿರುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು.
ಬಸವಣ್ಣನವರು ಜಾತಿ ಭೇದವಿಲ್ಲದೆ ಎಲ್ಲರೂ ನನ್ನವರೇ ಎಂಬ ಸಮಾನತೆಯ ಸಂದೇಶ ಸಾರಿದ್ದರು. ವೈಯಕ್ತಿಕ ಹಿತಾಸಕ್ತಿಗಾಗಿ ಸಮಾಜ ಮತ್ತು ಸಂಸ್ಕೃತಿಯನ್ನು ವಿಭಜಿಸುವುದು ಸರಿಯಲ್ಲ ಎಂದು ಹೇಳಿದರು.
ಕನ್ಹೇರಿ ಶ್ರೀಗಳ ಮಾತುಗಳು ಕಠೋರವಾಗಿರಬಹುದು. ಆದರೆ ಆ ಮಾತುಗಳ ಹಿಂದೆ ನೋವು ಅಡಗಿರುವುದು ಕಂಡುಬರುತ್ತದೆ. ಜೂನ್ 28ರಂದು ನಡೆಯಲಿರುವ ಸಮಾವೇಶದಲ್ಲಿ ವೈಯಕ್ತಿಕ ಟೀಕೆ-ಟಿಪ್ಪಣಿಗಳನ್ನು ತಪ್ಪಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಮಠಾಧೀಶರೂ ಹಠ ಸಾಧಿಸುವುದು ಒಳ್ಳೆಯದಲ್ಲ. ಪರಸ್ಪರ ಹಠ ಮತ್ತು ಭಿನ್ನಾಭಿಪ್ರಾಯಗಳು ಸಮಾಜದಲ್ಲಿ ಸಂಘರ್ಷಕ್ಕೆ ಕಾರಣವಾಗಬಹುದು. ಉಭಯ ಬಣದ ಶ್ರೀಗಳು ಸಮಾಜದ ಹಿತದೃಷ್ಟಿಯಿಂದ ಸಮಾನತೆ ಮತ್ತು ಸಾಮರಸ್ಯದ ಸಂದೇಶ ಸಾರಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಈಶ್ವರ್ ಖಂಡ್ರೆ ಅವರಿಗೆ ಆಶೀರ್ವಾದ ನೀಡಿ, ಅವರು ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಆಗುವ ವಿಶ್ವಾಸವಿದೆ ಎಂದು ಹೇಳಿದರು.
ರಾಜೇಶ್ವರ್ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಠಾಧೀಶರ ಹೇಳಿಕೆಗಳಿಂದ ಸಮಾಜದಲ್ಲಿ ಒಡಕು ಮೂಡುತ್ತಿರುವುದು ಆತಂಕಕಾರಿ ಬೆಳವಣಿಗೆ. ಆದ್ದರಿಂದ ಬಸವಕಲ್ಯಾಣದಲ್ಲಿ ನಡೆಯುವ ಬಸವಾದಿ ಶಿವಶರಣರ ಹಿಂದೂ ಸಮಾವೇಶವನ್ನು ಸಾಮರಸ್ಯ ಮತ್ತು ಶಾಂತಿಯ ವಾತಾವರಣದಲ್ಲಿ ನಡೆಸಲು ಮಠಾಧೀಶರ ಒಕ್ಕೂಟ ನಿರ್ಧರಿಸಿದೆ ಎಂದು ತಿಳಿಸಿದರು.
ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಉಭಯ ಬಣದ ಶ್ರೀಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗುವುದು ಸಮಾಜಕ್ಕೆ ಹಾನಿಕಾರಕ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಯಾವುದೇ ಬೆಳವಣಿಗೆ ನಡೆಯಬಾರದು. ಪ್ರತಿಯೊಬ್ಬ ಮಠಾಧಿಪತಿಗೂ ತಮ್ಮ ತತ್ವ-ಸಿದ್ಧಾಂತಗಳನ್ನು ಪ್ರಚಾರ ಮಾಡುವ ಸಂವಿಧಾನಬದ್ಧ ಹಕ್ಕಿದೆ. ಎಲ್ಲ ಪೂಜ್ಯರ ಬಗ್ಗೆಯೂ ನನಗೆ ಗೌರವ ಮತ್ತು ಉತ್ತಮ ಅಭಿಪ್ರಾಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಣವಾನಂದ್ ಸ್ವಾಮಿ, ಅಭಿನವ ಘನಲಿಂಗ್ ಸ್ವಾಮಿ, ರುದ್ರಮುನಿ ಶಿವಾಚಾರ್ಯ, ಸಿಂದನಕೇರಾದ ಶ್ರೀಗಳು, ಲೋಕೇಶ್ ಮಹಾರಾಜ್, ಶಾಂತವೀರ್ ಶಿವಾಚಾರ್ಯ ಪ್ರಮುಖರಾದ ಗುಂಡುರೆಡ್ಡಿ ಕಮಲಾಪುರೆ, ರವೀ ನಾವದ್ಗೆಕರ್, ಲೊಕೇಶ್ ಮೋಳಕೆರೆ ಸೇರಿದಂತೆ ಹಲವರಿದ್ದರು.






