Basavakalyan | ಹುಲಸೂರು ತಾಲೂಕು ಬರ ಪೀಡಿತ ಪ್ರದೇಶವೆಂದು ಘೋಷಿಸದಿದ್ದರೆ ಹೋರಾಟ : ಮಲ್ಲಿಕಾರ್ಜುನ್ ಖೂಬಾ ಎಚ್ಚರಿಕೆ

ಬಸವಕಲ್ಯಾಣ: ಹುಲಸೂರು ತಾಲೂಕನ್ನು ಬರಪೀಡಿತ ಪ್ರದೇಶವೆಂದು ಮುಂದಿನ 15 ದಿನಗಳೊಳಗೆ ಘೋಷಿಸದಿದ್ದರೆ ಜೆಡಿಎಸ್ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ಬಸವಕಲ್ಯಾಣದ ಮಾಜಿ ಶಾಸಕ ಮಲ್ಲಿಕಾರ್ಜುನ್ ಖೂಬಾ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಗರದ ತಮ್ಮ ಗೃಹ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹುಲಸೂರು ತಾಲೂಕಿನ ರೈತರು ಬರಗಾಲದಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಿ ಹುಲಸೂರು ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹಿಸಿದರು.
ತಾಲೂಕಿನ ಕೃಷಿ ಇಲಾಖೆಯಲ್ಲಿ 22 ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಸ್ಥಳೀಯ ಶಾಸಕರು ಕ್ರಮ ಕೈಗೊಳ್ಳುತ್ತಿಲ್ಲ. ರೈತರ ಸಮಸ್ಯೆಗಳ ಬಗ್ಗೆ ಬಸವಕಲ್ಯಾಣದ ಶಾಸಕರು ಕಾಳಜಿ ವಹಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಖೂಬಾ ಆರೋಪಿಸಿದರು.
ಬಸವಕಲ್ಯಾಣದಲ್ಲಿ ಶಾಸಕ ಶರಣು ಸಲಗರ ಹಾಗೂ ವಿಜಯಸಿಂಗ್ ಅವರ ಅವಧಿಯಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಎಂದು ಟೀಕಿಸಿದ ಅವರು, ಹಲವು ದಿನಗಳಿಂದ ಕೆಡಿಪಿ ಸಭೆ ನಡೆಸದೆ ಶಾಸಕರು ನಿರ್ಲಕ್ಷ್ಯ ವಹಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಬಸವಕಲ್ಯಾಣ ನಗರ ಯೋಜನಾ ಪ್ರಾಧಿಕಾರಕ್ಕೆ ಇದುವರೆಗೆ ಅಧ್ಯಕ್ಷರನ್ನು ನೇಮಿಸಿಲ್ಲ ಎಂದು ದೂರಿದರು.
ನಗರದ ತ್ರಿಪುರಾಂತ್ ಬಳಿಯ ಪ್ರವಾಸಿ ಮಂದಿರ ಹಾಳಾಗಿದ್ದು, ಅದರ ಅಭಿವೃದ್ಧಿಗೂ ಯಾವುದೇ ಗಮನ ನೀಡಲಾಗುತ್ತಿಲ್ಲ. ರಸ್ತೆ ಸೇರಿದಂತೆ ಮೂಲಸೌಕರ್ಯಗಳ ಕೊರತೆ ಹಾಗೂ ಹಲವು ಸಮಸ್ಯೆಗಳ ಕುರಿತು ರಾಜಕೀಯ ನಾಯಕರು ಧ್ವನಿ ಎತ್ತುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಸವಕಲ್ಯಾಣದಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಪಕ್ಕದ ತಾಂಬೋಳ್ ಗ್ರಾಮದಲ್ಲಿ ಜೂಜಾಟ ನಡೆಯುತ್ತಿರುವುದರಿಂದ ಅಲ್ಲಿನ ಲಾಡ್ಜ್‌ಗಳು ದುಶ್ಚಟಗಳ ಅಡ್ಡೆಗಳಾಗಿ ಮಾರ್ಪಟ್ಟಿವೆ. ಇಂತಹ ಚಟುವಟಿಕೆಗಳಿಗೆ ಕೂಡಲೇ ಕಡಿವಾಣ ಹಾಕಬೇಕು ಎಂದು ಮಲ್ಲಿಕಾರ್ಜುನ್ ಖೂಬಾ ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಜೆಡಿಎಸ್ ತಾಲೂಕಾಧ್ಯಕ್ಷ ವಾಲ್ಮೀಕಿ ಖನಕುರೆ ಹಾಗೂ ಸತೀಶ್ ಹಿರೇಮಠ್ ಸೇರಿದಂತೆ ಹಲವರಿದ್ದರು.






