ಬಸವಕಲ್ಯಾಣ | ಕೆಕೆಆರ್‌ಡಿಬಿ ಅನುದಾನ ಎಲ್ಲಿ ಖರ್ಚಾಗುತ್ತಿದೆ ಎಂಬ ಬಗ್ಗೆ ಚರ್ಚೆಯಾಗಲಿ: ವಿಜಯ್ ಸಿಂಗ್

ಬಸವಕಲ್ಯಾಣ: ಕೆಕೆಆರ್‌ಡಿಬಿ ಇಲಾಖೆಯಿಂದ ತಾಲೂಕಿಗೆ ಪ್ರತಿವರ್ಷ 300 ಕೋಟಿ ರೂ. ಅನುದಾನ ಬಿಡುಗಡೆಯಾಗುತ್ತಿದ್ದು, ಈ ಹಣ ಎಲ್ಲಿ ಮತ್ತು ಹೇಗೆ ಖರ್ಚಾಗುತ್ತಿದೆ ಎಂಬ ಬಗ್ಗೆ ಚರ್ಚೆಯಾಗಬೇಕು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯ್ ಸಿಂಗ್ ಹೇಳಿದರು.
ನಗರದ ತಮ್ಮ ಗೃಹ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆ ಅಭಿವೃದ್ಧಿಗಾಗಿ ಕೆಕೆಆರ್‌ಡಿಬಿ ಇಲಾಖೆಯಿಂದ ಪ್ರತಿವರ್ಷ 300 ಕೋಟಿ ರೂ. ಬಿಡುಗಡೆಯಾಗುತ್ತಿದೆ. ಈ ಅನುದಾನದ ಹಣ ಎಲ್ಲಿ ಖರ್ಚಾಗುತ್ತಿದೆ? ಅನುದಾನದಡಿ ಕೈಗೊಳ್ಳಲಾಗುತ್ತಿರುವ ರಸ್ತೆ ಕಾಮಗಾರಿಗಳು ಯಾವ ಗುಣಮಟ್ಟದಲ್ಲಿ ನಡೆಯುತ್ತಿವೆ ಎಂಬುದರ ಕುರಿತು ಚರ್ಚೆಯಾಗಬೇಕು ಎಂದರು.
ಈ ಹಿನ್ನೆಲೆಯಲ್ಲಿ ತಾಲೂಕು ಕೆಡಿಪಿ ಸಭೆ ನಡೆಸಬೇಕು ಎಂದು ಒತ್ತಾಯಿಸಿದರೂ, ಇಲ್ಲಿನ ಶಾಸಕರು ಹೆಚ್ಚಿನ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರಕ್ಕೆ ನೀಡುತ್ತಿದ್ದಾರೆ. ಅಲ್ಲಿ ಒಬ್ಬರೇ ಇಂಜಿನಿಯರ್ ಇದ್ದಾರೆ. ಸಾಕಷ್ಟು ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಗೌರ್ ಗ್ರಾಮದ ರಸ್ತೆಯ ಕಾಮಗಾರಿಯೂ ಕಳಪೆಯಾಗಿದ್ದು, ಈ ಕುರಿತು ಮತ್ತೊಮ್ಮೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಧ್ವನಿ ಎತ್ತಿದ ಬಳಿಕ ಶಾಸಕರು ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ನೀಡುವುದನ್ನು ಕಡಿಮೆ ಮಾಡಿದ್ದಾರೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಭೀಕರ ಬರಗಾಲ ಎದುರಾಗಿದ್ದು, ನೀರಿನ ಸಮಸ್ಯೆ ವಿಪರೀತವಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯುತ್ ಸಮಸ್ಯೆಯೂ ಹೆಚ್ಚಾಗಿ ಕಾಡುತ್ತಿದೆ. ಈ ಎಲ್ಲ ಸಮಸ್ಯೆಗಳ ಕುರಿತು ಚರ್ಚಿಸಲು ಕೆಡಿಪಿ ಸಭೆ ನಡೆಸುವುದು ಅವಶ್ಯಕವಾಗಿದೆ ಎಂದು ಹೇಳಿದರು.
ಕಳೆದ ಒಂದು ವರ್ಷದಲ್ಲಿ ಮೂರರಿಂದ ನಾಲ್ಕು ಕೆಡಿಪಿ ಸಭೆಗಳು ನಡೆಯಬೇಕಿತ್ತು. ಆದರೆ, ಇಲ್ಲಿನ ಶಾಸಕರು ಸಭೆ ನಡೆಸಿಲ್ಲ. ಹೀಗಾಗಿ ಇತ್ತೀಚೆಗೆ ಕೆಡಿಪಿ ಸದಸ್ಯರು ಶಾಸಕರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ ಎಂದರು.
ಕಳೆದ ಸೆಪ್ಟೆಂಬರ್‌ನಲ್ಲಿ 250 ಹಾಸಿಗೆಗಳ ಜಿಲ್ಲಾಮಟ್ಟದ ಆಸ್ಪತ್ರೆಯ ಶಂಕುಸ್ಥಾಪನೆ ಕಾರ್ಯಕ್ರಮ ನಡೆದಿತ್ತು. ಆದರೆ, ಈ ಕುರಿತು ಹೆಚ್ಚಿನ ಚರ್ಚೆಯಾಗಲಿಲ್ಲ. ಬದಲಾಗಿ ಟಿಎಚ್‌ಒ ಹಾಗೂ ಡಿಎಚ್‌ಒ ಅಮಾನತುಗೊಂಡಿರುವ ವಿಚಾರವೇ ಹೆಚ್ಚು ಚರ್ಚೆಯಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಬಸವಕಲ್ಯಾಣದ ಶಾಸಕರು ಸೋಲುವ ಭೀತಿಯಲ್ಲಿದ್ದಾರೆ. ಹೀಗಾಗಿ ನನ್ನ ಹಾಗೂ ನನ್ನ ಕುಟುಂಬದವರ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಒಮ್ಮೆ ಜೇವರ್ಗಿಗೆ ತೆರಳಿ ಅಲ್ಲಿನ ಅಭಿವೃದ್ಧಿಯನ್ನು ನೋಡಲಿ. ಅಲ್ಲಿನ ನೀರಾವರಿ ಯೋಜನೆಗಳ ಕುರಿತು ಮಾಹಿತಿ ಪಡೆದುಕೊಳ್ಳಲಿ. ನಾವು ಕಳೆದ 55 ವರ್ಷಗಳಿಂದ ರಾಜಕಾರಣದಲ್ಲಿದ್ದೇವೆ. 12 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ 11 ಬಾರಿ ಗೆಲುವು ಸಾಧಿಸಿದ್ದೇವೆ. ಕೇವಲ ಎರಡು ಬಾರಿ ಗೆದ್ದಿರುವ ಶಾಸಕರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ವಿಜಯ್ ಸಿಂಗ್ ವಾಗ್ದಾಳಿ ನಡೆಸಿದರು.






