ಅಪರಿಚಿತರು ನೀಡುವ ಆಹಾರ ಪದಾರ್ಥ ಬಗ್ಗೆ ಜಾಗೃತರಾಗಿರಿ : ರವಿಶಂಕರ್
ಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆ

ಬೀದರ್ : ಅಪರಿಚಿತರು ನೀಡುವ ಆಹಾರ ಪದಾರ್ಥ ಬಗ್ಗೆ ಜಾಗೃತರಾಗಿರಬೇಕು ಎಂದು ಅಬಕಾರಿ ಉಪ ಆಯುಕ್ತ ರವಿಶಂಕರ್ ಅವರು ತಿಳಿಸಿದರು.
ಇಂದು ತೋಟಗಾರಿಕೆ ಮಹಾವಿದ್ಯಾಲಯ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಂಯುಕ್ತಾಶ್ರಯದಲ್ಲಿ ಬೀದರ್ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಲವಾರು ಯುವಕರು ಡ್ರಗ್ಸ್ ಗೆ ಒಳಗಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇದಕ್ಕೆ ಕಾರಣ ಅಪರಿಚಿತರು ನೀಡುವ ತಿನ್ನುವ ಹಾಗೂ ಪಾನೀಯ ಪದ್ದಾರ್ಥಗಳಾಗಿದೆ. ಹಾಗಾಗಿ ಯುವಕರು ಅಪರಿಚಿತರು ನೀಡುವ ಆಹಾರ ಪದಾರ್ಥಗಳನ್ನು ಸೇವಿಸದೆ ಜಾಗರೂಕರಾಗಿದ್ದು, ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಮನೋವೈದ್ಯ ಡಾ.ಅಮಲಾ ಷರೀಫ್ ಅವರು ಮಾತನಾಡಿ, ಡ್ರಗ್ಸ್ ಸೇವನೆಯಿಂದ ಕ್ಯಾನ್ಸರ್, ಸ್ಟ್ರೋಕ್, ಹೃದಯಘಾತ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿವೆ. ಡ್ರಗ್ಸ್ ವ್ಯಸನದಿಂದ ಹೊರ ಬರುವ ಮಾರ್ಗ ಅತ್ಯಂತ ಕಠಿಣವಾಗಿದೆ. ಅಪರಿಚಿತರು ವಿತರಿಸುವ ಯಾವುದೇ ರೀತಿಯ ಖಾದ್ಯ ಪದಾರ್ಥಗಳು ನೇರವಾಗಿ ನಿರಾಕರಿಸಬೇಕು. ದುಶ್ಚಟಗಳಿಂದ ದೂರವಿರಬೇಕು. ಪರಿಸ್ಥಿತಿ ಕೈ ಮೀರುವ ಮೊದಲು ಈ ಸಮಸ್ಯೆಯಿಂದ ಹೊರಬರುವ ಮನಸ್ಸು ಮಾಡಿದರೆ ಖಂಡಿತ ಡ್ರಗ್ಸ್ ವ್ಯಸನದಿಂದ ಮುಕ್ತವಾಗಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ. ಪಾಟೀಲ್ ಅವರು ಮಾತನಾಡಿ, ಸಾಕಷ್ಟು ಯುವಕರು ಡ್ರಗ್ಸ್ ಎಂಬ ವ್ಯಸನಕ್ಕೆ ದಾಸರಾಗುತ್ತಿದ್ದಾರೆ. ಇದರಿಂದಾಗಿ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಹಾಳಾಗುತ್ತಿದೆ. ಕ್ರಮೇಣ ಮಾನಸಿಕ ಖಿನ್ನತೆಗೂ ಒಳಗಾಗುತ್ತಿದ್ದಾರೆ. ಡ್ರಗ್ಸ್ ಸೇವನೆಯಿಂದ ಸಾಮಾಜಿಕ ಅಪರಾಧಗಳು ಹೆಚ್ಚುತ್ತಿವೆ. ಆದ್ದರಿಂದ ಯುವಕರು ಮಾದಕ ದುಶ್ಚಟಗಳಗೆ ಒಳಗಾಗದೆ ವೈಜ್ಞಾನಿಕ ಜೀವನ ನಡೆಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮದ ಅಧಿಕಾರಿ ಡಾ. ವಿಜಯ್ ಮಹಾಂತೇಶ್, ಡಾ.ರಮೇಶ್ ನಾಯಕ, ರೆಡ್ ಕ್ರಾಸ್ ನ ಸಂಯೋಜಕಿ ಡಾ.ಕವಿತಾ ರಾಠೋಡ್, ಅಬಕಾರಿ ಉಪ ಅಧಿಕ್ಷಕ ಆನಂದ್ ಉಕ್ಕಲಿ, ಮನೋಶಾಸ್ತ್ರಜ್ಞ ಡಾ.ಮಲ್ಲಿಕಾರ್ಜುನ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೀರಶೇಟ್ಟಿ ಚನ್ನಶೆಟ್ಟಿ ಹಾಗೂ ತೋಟಗಾರಿಕಾ ಮಹಾವಿದ್ಯಾಲಯದ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







