ಭಾಲ್ಕಿ | ಜನವರಿಯಲ್ಲಿ ಚನ್ನಬಸವೇಶ್ವರ ಗುರುಕುಲದಲ್ಲಿ 5 ದಿನ ಗೋಲ್ಡನ್ ಸ್ಕಾಲರ್‌ಶಿಪ್ ಪ್ರವೇಶ ಪರೀಕ್ಷೆ : ಡಾ.ಬಸವಲಿಂಗ ಪಟ್ಟದೇವರು

ಭಾಲ್ಕಿ, ಡಿ.30: ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ವತಿಯಿಂದ ಗೋಲ್ಡನ್ ಸ್ಕಾಲರ್‌ಶಿಪ್ ಪ್ರವೇಶ ಪರೀಕ್ಷೆ ಯೋಜನೆ ಮುಂದುವರಿಸಿದ್ದು, ಜನವರಿ ತಿಂಗಳಲ್ಲಿ ಐದು ದಿವಸ ಪ್ರವೇಶ ಪರೀಕ್ಷೆ ನಡೆಯಲಿವೆ ಎಂದು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ನ ಅಧ್ಯಕ್ಷ, ನಾಡೋಜ ಡಾ.ಬಸವಲಿಂಗ ಪಟ್ಟದೇವರು ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಯ 25ನೇ ವರ್ಷಾಚರಣೆ ಹಿನ್ನಲೆಯಲ್ಲಿ ಕಳೆದ 10 ವರ್ಷಗಳ ಹಿಂದೆ ಗುರುಕುಲ ಗೊಲ್ಡನ್ ಸ್ಕಾಲರ್‌ಶಿಪ್ ಯೋಜನೆ ಪರಿಚಯಿಸಲಾಗಿತ್ತು. ಈ ಯೋಜನೆಗೆ ಮಕ್ಕಳು, ಪಾಲಕರು ಹೆಚ್ಚಿನ ಆಸಕ್ತಿ ತೋರುತ್ತಿರುವುದರಿಂದ ಗೊಲ್ಡನ್ ಸ್ಕಾಲರ್‌ಶಿಪ್ ಯೋಜನೆ ಹಾಗೆಯೇ ಮುಂದುವರಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಈ ಯೋಜನೆ ಬಡವರು, ರೈತರು, ಕೂಲಿ ಕಾರ್ಮಿಕರ ಮಕ್ಕಳಿಗೆ ವರದಾನವಾಗಿದೆ. ಪ್ರತಿ ವರ್ಷ ನೂರು ಮಕ್ಕಳು ಉಚಿತ ಶಿಕ್ಷಣದ ಸೌಲಭ್ಯ ಪಡೆದು ನೀಟ್ ಹಾಗೂ ಐಐಟಿಯಲ್ಲಿ ಉತ್ತಮ ಸಾಧನೆ ತೋರುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಪೀಠಾಧಿಪತಿ ಗುರುಬಸವ ಪಟ್ಟದೇವರು ಮಾತನಾಡಿ, ಗಡಿಭಾಗದ ಬಡ ಪ್ರತಿಭಾವಂತ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ನಾಡೋಜ ಡಾ.ಬಸವಲಿಂಗ ಪಟ್ಟದೇವರ ಮಾರ್ಗದರ್ಶನದಲ್ಲಿ ಗುರುಕುಲ ಸ್ಕಾಲರ್‌ಶಿಪ್ ಯೋಜನೆ ಜಾರಿಗೆ ತಂದಿದ್ದೇವೆ. ಈ ಬಾರಿಯು ಚನ್ನಬಸವೇಶ್ವರ ಗುರುಕುಲದಲ್ಲಿ 2026-27ನೇ ಸಾಲಿನ ಪ್ರವೇಶಕ್ಕಾಗಿ ಜ.4, 10, 11, 18 ಮತ್ತು 25ರಂದು ಪ್ರವೇಶ ಪರೀಕ್ಷೆ ಏರ್ಪಡಿಸಿದ್ದೇವೆ. ಪ್ರಸ್ತುತ ಎಸೆಸೆಲ್ಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕನ್ನಡ, ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಹಾಲಿಂಗ ಸ್ವಾಮೀಜಿ, ಪ್ರಾಚಾರ್ಯ ಬಸವರಾಜ್ ಮೊಳಕೀರೆ, ಆಡಳಿತಾಧಿಕಾರಿ ಮೋಹನ್ ರೆಡ್ಡಿ ಉಪಸ್ಥಿತರಿದ್ದರು.







