ಭಾಲ್ಕಿ | ವಿಘ್ನವಿಲ್ಲದೆ ಗಣೇಶೋತ್ಸವ ಆಚರಿಸಿ: ಡಿವೈಎಸ್ಪಿ ಬಲ್ಲಪ್ಪ ನಂದಗಾವೆ

ಭಾಲ್ಕಿ: ವಿನಾಯಕನ ಹಬ್ಬವನ್ನು ಶಾಂತಿ, ಸೌಹಾರ್ದತೆ ಮತ್ತು ಯಾವುದೇ ವಿಘ್ನವಿಲ್ಲದೆ ಆಚರಿಸಬೇಕು ಎಂದು ಭಾಲ್ಕಿ ಡಿವೈಎಸ್ಪಿ ಬಲ್ಲಪ್ಪ ನಂದಗಾವೆ ಹೇಳಿದರು.
ಪಟ್ಟಣದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುರುವಾರ ಮೆಹಕರ್, ಧನ್ನೂರ್ (ಹೆಚ್) ಹಾಗೂ ಖಟಕಚಿಂಚೋಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳ ಗಣೇಶೋತ್ಸವ ಸಮಿತಿಗಳ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಣೇಶನನ್ನು ವಿಘ್ನವಿನಾಯಕ ಎಂದು ಕರೆಯಲಾಗುತ್ತದೆ. ಆದ್ದರಿಂದ ಗಣೇಶೋತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕು. ಗಣೇಶೋತ್ಸವವು ಸ್ವಾತಂತ್ರ್ಯ ಚಳವಳಿಯ ಭಾಗವಾಗಿ ಆರಂಭಗೊಂಡಿದ್ದು, ಎಲ್ಲರಿಗೂ ಹಬ್ಬವನ್ನು ಆಚರಿಸುವ ಹಕ್ಕಿದೆ. ಉತ್ಸವವನ್ನು ಉತ್ತಮ ರೀತಿಯಲ್ಲಿ ನಡೆಸಲು ಎಲ್ಲಾ ಇಲಾಖೆಗಳು ಸಹಕಾರ ನೀಡಲಿವೆ ಎಂದು ಹೇಳಿದರು.
ಅಗ್ನಿಶಾಮಕ ಠಾಣೆ ಅಧಿಕಾರಿ ದತ್ತಾತ್ರಿ ಮಾತನಾಡಿ, ಎಲ್ಲ ಗಣೇಶ ಪೆಂಡಾಲ್‌ಗಳಲ್ಲಿ ಅಗ್ನಿ ನಿರೋಧಕ ವ್ಯವಸ್ಥೆ ಕಡ್ಡಾಯವಾಗಿ ಅಳವಡಿಸಬೇಕು. ಅಗ್ನಿ ಅವಘಡಗಳು ಹೆಚ್ಚಾಗಿ ನಿರ್ಲಕ್ಷ್ಯದಿಂದಲೇ ಸಂಭವಿಸುವುದರಿಂದ ಸಮಿತಿಯವರು ಎಚ್ಚರಿಕೆಯಿಂದ ಹಬ್ಬ ಆಚರಿಸಬೇಕು ಎಂದು ಸಲಹೆ ನೀಡಿದರು.
ತಹಶೀಲ ಕಚೇರಿಯ ಶಿರಸ್ತೆದಾರ ಗೋಪಾಲ್ ಹಿಪ್ಪರಗಿ ಮಾತನಾಡಿ, ಪ್ರತಿ ಗಣೇಶೋತ್ಸವ ಸಮಿತಿಯೂ ತಮ್ಮ ಪೆಂಡಾಲ್‌ಗೆ ಸಂಬಂಧಿಸಿದಂತೆ ಶಾಂತಿ ಸಭೆ ನಡೆಸಿ ಜವಾಬ್ದಾರಿಗಳನ್ನು ಹಂಚಿಕೊಳ್ಳಬೇಕು. ಯಾವುದೇ ಅವಘಡ ಅಥವಾ ವಿವಾದ ಸಂಭವಿಸಿದರೆ ಕಾನೂನನ್ನು ಕೈಗೆತ್ತಿಕೊಳ್ಳದೆ ಪೊಲೀಸರ ಸಹಾಯ ಪಡೆಯಬೇಕು ಎಂದು ತಿಳಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಸೂರ್ಯಕಾಂತ್ ಬಿರಾದಾರ್, ಗ್ರಾಮೀಣ ವೃತ್ತ ನಿರೀಕ್ಷಕ ಹನುಮರೆಡ್ಡೆಪ್ಪ, ಪಿಎಸ್‌ಐ ಅಶೋಕ್ ಪಾಟೀಲ್, ಮೆಹಕರ್ ಪಿಎಸ್‌ಐ ಸುದರ್ಶನ್ ರೆಡ್ಡಿ, ಖಟಕಚಿಂಚೋಳಿ ಪಿಎಸ್‌ಐ ವಿಶ್ವಾರಾಧ್ಯ ಘಾಣೂರ್, ಧನ್ನೂರ್(ಹೆಚ್) ಪಿಎಸ್‌ಐ ರಾಜಕುಮಾರ್ ಜಾಮಗೊಂಡ, ಜೆಸ್ಕಾಂನ ಸತೀಶಕುಮಾರ್ ಹಾಗೂ ಪುರಸಭೆ ಉಪಾಧ್ಯಕ್ಷ ವಿಜಯಕುಮಾರ್ ರಾಜಭವನ ಉಪಸ್ಥಿತರಿದ್ದರು. ಸಿಪಿಐ ಹನುಮರೆಡ್ಡಿ ಸ್ವಾಗತಿಸಿದರು. ಸಿ.ಜಿ.ಬಿರಾದಾರ್ ನಿರೂಪಿಸಿದರು. ಮಹೇಶ್ ವಂದಿಸಿದರು.






