Bhalki | ಡೋಣಗಾಪೂರ್ ಗ್ರಾಮದಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕೆ ಸಿಇಒ ಸೂಚನೆ
ತೆರಿಗೆ ಹಣ ಪಾವತಿಸುವಂತೆ ಗ್ರಾಮಸ್ಥರಿಗೆ ಸೂಚನೆ

ಭಾಲ್ಕಿ: ತಾಲ್ಲೂಕಿನ ಡೋಣಗಾಪೂರ್ ಗ್ರಾಮದಲ್ಲಿ ಎರಡು ಹೊಸ ಕೊಳವೆ ಬಾವಿಗಳನ್ನು ಕೊರೆಸಿ ನೀರಿನ ಸಮಸ್ಯೆ ಬಗೆಹರಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲರಾವ್ ಹೇಳಿದರು.
‘ಬೆಳಿಗ್ಗೆಯ ನಡೆ–ಹಳ್ಳಿ ಕಡೆ’ ಅಭಿಯಾನದ ಅಂಗವಾಗಿ ಶುಕ್ರವಾರ ಡೋಣಗಾಪೂರ್ ಗ್ರಾಮಕ್ಕೆ ಭೇಟಿ ನೀಡಿದ ಅವರು, ಗ್ರಾಮದ ಪ್ರತಿಯೊಂದು ಓಣಿಯಲ್ಲೂ ಸಂಚರಿಸಿ ನೀರಿನ ಸಮಸ್ಯೆಯನ್ನು ಪರಿಶೀಲಿಸಿದರು.
ನಂತರ ಗ್ರಾಮ ಪಂಚಾಯಿತಿಯಲ್ಲಿ ತುರ್ತು ಸಭೆ ನಡೆಸಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿ ಯಥೇಚ್ಛವಾಗಿ ನೀರು ಲಭ್ಯವಿದ್ದು, ಗ್ರಾಮಸ್ಥರು ನೀರನ್ನು ಹಿತಮಿತವಾಗಿ ಬಳಸಬೇಕು. ನೀರು ಪೋಲಾಗದಂತೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಹೊಸ ಕೊಳವೆ ಬಾವಿಗಳನ್ನು ಕೊರೆಸಿ ಗ್ರಾಮದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವವರೆಗೆ ಪ್ರತಿದಿನ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರಿಂದ ಒಟ್ಟು 32 ಲಕ್ಷ ರೂ. ತೆರಿಗೆ ಬರಬೇಕಿದ್ದು, ಈವರೆಗೆ ಕೇವಲ 6 ಲಕ್ಷ ರೂ. ಮಾತ್ರ ಪಾವತಿಯಾಗಿದೆ. ಬಾಕಿ ತೆರಿಗೆ ಪಾವತಿಸದ ಗ್ರಾಮಸ್ಥರು ಆದಷ್ಟು ಬೇಗ ತೆರಿಗೆ ಪಾವತಿಸಬೇಕು ಎಂದು ತಿಳಿಸಿದರು.
ಇದೇ ವೇಳೆ ಗ್ರಾಮದ ಹೊರವಲಯದಲ್ಲಿ ವಿಬಿ-ಜಿ ರಾಮ ಜಿ ಯೋಜನೆಯಡಿ ನಡೆಯುತ್ತಿದ್ದ ಸಮುದಾಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲಿನ ಕೂಲಿಕಾರರೊಂದಿಗೆ ಸಂವಾದ ನಡೆಸಿದ ಸಿಇಒ, ಅವರೊಂದಿಗೆ ಶ್ರಮದಾನದಲ್ಲಿಯೂ ಪಾಲ್ಗೊಂಡರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬೀರೆಂದ್ರಸಿಂಗ್ ಠಾಕೂರ್, ನೀರು ಸರಬರಾಜು ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ದತ್ತಾತ್ರಿ ಮೇಧಾ, ಸಹಾಯಕ ನಿರ್ದೇಶಕ ಬಾಲಾಜಿ ಕೋಟೆ, ಎಇ ಅಶ್ವಿನಿ ಚೌದ್ರಿ, ಜೆಇ ಬಸವರಾಜ್ ರುಮ್ಮಾ, ಪಿಡಿಒ ಬಲಭೀಮ, ಐಇಸಿ ಸಂಯೋಜಕ ಗಣಪತಿ ಹರಕೂಡೆ, ಡಿಇಒ ರಮೇಶ್ ಸೂರ್ಯವಂಶಿ ಹಾಗೂ ಸುರೇಖಾ ಸೇರಿದಂತೆ ಇತರರು ಉಪಸ್ಥಿತರಿದ್ದರು.






