Bhalki | ಯಂಗ್ ಸೈಂಟಿಸ್ಟ್ ಅವಾರ್ಡ್ಗೆ ಡಾ.ಕಿರಣ ಸಜ್ಜನಶೆಟ್ಟಿ ಆಯ್ಕೆ

ಭಾಲ್ಕಿ: ತಾಲೂಕಿನ ತಳವಾಡ (ಕೆ) ಗ್ರಾಮದ ಚನ್ನಬಸವೇಶ್ವರ ಗುರುಕುಲ ಕಾಲೇಜಿನ ಪ್ರಾಂಶುಪಾಲ ಡಾ. ಕಿರಣ ಸಜ್ಜನಶೆಟ್ಟಿ ಅವರು ಗಣಿತ ಕ್ಷೇತ್ರದಲ್ಲಿನ ಸಂಶೋಧನಾ ಕೊಡುಗೆ ಹಾಗೂ ಶೈಕ್ಷಣಿಕ ಸಾಧನೆಗಾಗಿ ಇಂಡಿಯನ್ ಸೈಂಟಿಸ್ಟ್ ಅವಾರ್ಡ್ಸ್ನ 39ನೇ ಆವೃತ್ತಿಯ ‘ಯಂಗ್ ಸೈಂಟಿಸ್ಟ್ ಅವಾರ್ಡ್–ಮ್ಯಾಥಮೆಟಿಕ್ಸ್’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಡಾ. ಕಿರಣ ಸಜ್ಜನಶೆಟ್ಟಿ ಅವರು ಗಣಿತ ಮತ್ತು ಅನ್ವಯಿಕ ಗಣಿತ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಸಂಶೋಧನೆ ನಡೆಸುತ್ತಿದ್ದಾರೆ. ಫ್ಲೂಯಿಡ್ ಡೈನಾಮಿಕ್ಸ್, ಮ್ಯಾಗ್ನೆಟೋಹೈಡ್ರೋಡೈನಾಮಿಕ್ಸ್, ನಾನ್-ನ್ಯೂಟೋನಿಯನ್ ಫ್ಲೂಯಿಡ್ ಫ್ಲೋ, ನ್ಯಾನೋಫ್ಲೂಯಿಡ್ಸ್, ಪೋರಸ್ ಮೀಡಿಯಾ, ಹೀಟ್ ಟ್ರಾನ್ಸ್ಫರ್ ಹಾಗೂ ಮ್ಯಾಥಮೆಟಿಕಲ್ ಮಾಡೆಲಿಂಗ್ ಸೇರಿದಂತೆ ವಿವಿಧ ಆಧುನಿಕ ಸಂಶೋಧನಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅವರು ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಶೋಧನಾ ನಿಯತಕಾಲಿಕೆಗಳಲ್ಲಿ ತಮ್ಮ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದು, ಸಂಶೋಧನಾ ಕ್ಷೇತ್ರಕ್ಕೆ ನಿರಂತರ ಕೊಡುಗೆ ನೀಡುತ್ತಿದ್ದಾರೆ. ಅಲ್ಲದೆ, ವಿವಿಧ ಅಂತರರಾಷ್ಟ್ರೀಯ ಸಂಶೋಧನಾ ನಿಯತಕಾಲಿಕೆಗಳಿಗೆ ಪೀರ್ ರಿವ್ಯೂವರ್ ಆಗಿಯೂ ಸೇವೆ ಸಲ್ಲಿಸುತ್ತಿದ್ದು, ಸಂಶೋಧನಾ ಮೌಲ್ಯಮಾಪನ ಕ್ಷೇತ್ರದಲ್ಲಿಯೂ ಗಮನಾರ್ಹ ಕೊಡುಗೆ ನೀಡಿದ್ದಾರೆ.
ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಡಾ. ಕಿರಣ ಸಜ್ಜನಶೆಟ್ಟಿ ಅವರು ಸಲ್ಲಿಸುತ್ತಿರುವ ನಿರಂತರ ಕೊಡುಗೆಯನ್ನು ಪರಿಗಣಿಸಿ ಈ ಗೌರವಕ್ಕೆ ಆಯ್ಕೆಯಾಗಿರುವುದು ಚನ್ನಬಸವೇಶ್ವರ ಗುರುಕುಲ ಕಾಲೇಜಿಗೆ ಹೆಮ್ಮೆಯ ಸಂಗತಿಯಾಗಿದೆ. ಅವರ ಸಾಧನೆಯು ವಿದ್ಯಾರ್ಥಿಗಳಲ್ಲಿ ಸಂಶೋಧನೆ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಆಸಕ್ತಿ ಮೂಡಿಸಲು ಪ್ರೇರಣೆಯಾಗಲಿದೆ ಎಂದು ಸಂಸ್ಥೆಯ ಪ್ರಮುಖರು ತಿಳಿಸಿದ್ದಾರೆ.
ಡಾ. ಕಿರಣ ಸಜ್ಜನಶೆಟ್ಟಿ ಅವರ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ನಾಡೋಜ ಡಾ. ಬಸವಲಿಂಗ ಪಟ್ಟದೇವರು, ಹಿರೇಮಠ ಪೀಠಾಧಿಪತಿ ಗುರುಬಸವ ಪಟ್ಟದೇವರು, ಕಾರ್ಯದರ್ಶಿ ಮಹಾಲಿಂಗ ಸ್ವಾಮೀಜಿ, ಆಡಳಿತಾಧಿಕಾರಿ ಮೋಹನರೆಡ್ಡಿ, ಬಸವರಾಜ್ ಮೊಳಕೀರೆ ಸೇರಿದಂತೆ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.






