ಭಾಲ್ಕಿ | ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ತತ್ವ ಬೆಳೆಸುವುದು ಅತ್ಯಗತ್ಯ : ಶಿವಕುಮಾರ್ ಹಿರೇಮಠ್

ಭಾಲ್ಕಿ : ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ತತ್ವ ಬೆಳೆಸುವುದು ಅತ್ಯಗತ್ಯವಾಗಿದೆ ಎಂದು ವಿಜ್ಞಾನ ಶಿಕ್ಷಕ ಶಿವಕುಮಾರ್ ಹಿರೇಮಠ್ ಅವರು ಹೇಳಿದರು.
ಭಾಲ್ಕಿ ತಾಲೂಕಿನ ಡೊಣಗಾಪೂರ್ ಗ್ರಾಮದ ಸಂಸ್ಕಾರ ವ್ಯಾಲಿ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿಶೇಷ ಉಪನ್ಯಾಸ ಮಂಡಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಒಬ್ಬ ವಿಜ್ಞಾನಿ ಅಡಗಿದ್ದಾನೆ. ವಿದ್ಯಾರ್ಥಿಗಳು ವೈಜ್ಞಾನಿಕ ತತ್ವಗಳನ್ನು ಮೈಗೂಡಿಸಿಕೊಂಡು ವಿದ್ಯಾಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.
ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಯೊಂದು ಪ್ರಶ್ನೆಗೂ ವೈಜ್ಞಾನಿಕ ಮನೋಭಾವದಿಂದ ಉತ್ತರಿಸಬೇಕು. ಮಕ್ಕಳ ಮನಸ್ಸನ್ನು ಅರಿತು ಪಾಠ ಮಾಡಬೇಕು. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ತತ್ವಗಳನ್ನು ಬೆಳೆಸುವ ಕಾರ್ಯವಾಗಬೇಕು. ಪ್ರತಿಯೊಂದು ಕಣ, ಕಣದಲ್ಲಿಯೂ ವಿಜ್ಞಾನವಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ್ ದಾಬಶೆಟ್ಟಿ, ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವವಿರಬೇಕು. ಏಕೆ? ಏನು? ಹೇಗೆ? ಎನ್ನುವ ಪ್ರಶ್ನೆಗಳ ಮೇಲೆ ವಿದ್ಯಾರ್ಥಿಗಳು ಗಮನ ಹರಿಸಿದರೆ ಉತ್ತಮ ವಿಜ್ಞಾನಿಗಳಾಗಿ ಹೊರ ಹೊಮ್ಮಬಹುದು. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿಯೂ ಒಬ್ಬ ವಿಜ್ಞಾನಿ ಇದ್ದಾನೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ವೈಜ್ಞಾನಿಕ ಆಸಕ್ತಿಯನ್ನು ಹೆಚ್ಚಿಸಿಕೊಂಡು ವಿದ್ಯಾಭ್ಯಾಸ ಮಾಡಿದಲ್ಲಿ ಉತ್ತಮ ವಿಜ್ಞಾನಿಗಳಾಗಿ ಹೊರಹೊಮ್ಮಬಹುದು ಎಂದು ತಿಳಿಸಿದರು.
ಕಸಾಪ ನಗರ ಘಟಕದ ಅಧ್ಯಕ್ಷ ಸಂತೋಷ್ ಬಿ.ಜಿ ಪಾಟೀಲ್ ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕನ್ನಡದೊಂದಿಗೆ ಇಂಗ್ಲೀಷ್ ಕಲಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇಂಗ್ಲಿಷ್ ಭಾಷೆ ಬದುಕಿಗೆ ಬಹುಮುಖ್ಯವಾಗಿದೆ. ಆದರೆ ಕನ್ನಡ ತನವನ್ನು ಮರೆಯಬಾರದು. ಗಡಿ ಭಾಗದಲ್ಲಿ ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಕನ್ನಡ ಉಳಿಸಿ, ಬೆಳೆಸಿಕೊಂಡು ಹೋಗುವ ಕಾರ್ಯವಾಗಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ದೀಪಕ್ ಕಾಂಬಳೆ, ಕಸಾಪ ತಾಲೂಕು ಉಪಾಧ್ಯಕ್ಷ ಮಲ್ಲಿಕಾರ್ಜುನ್ ಕುಂಚಗೆ, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುನೀಲಕುಮಾರ್ ಬಳತೆ, ಶಿಕ್ಷಕ ವಿಜಯಕುಮಾರ್ ಗೌಡಗಾವೆ, ನೀಲಕಂಠರಾವ್ ಉಪ್ಪೆ, ಶಿವಕುಮಾರ್ ಸ್ವಾಮಿ, ಸತೀಶ್ ಸ್ವಾಮಿ, ಮಲ್ಲಿಕಾರ್ಜುನ್ ಉಪ್ಪಿನ್, ಗೋವಿಂದರಾವ್ ಪಾಟೀಲ್ ಹಾಗೂ ಉಮೇಶ್ ಜೊಳದಾಪಕೆ ಸೇರಿದಂತೆ ಇತರರು ಉಪಸ್ಥಿತರಿದ್ದರು.







