ಭಾಲ್ಕಿ | ಗುರುಕುಲ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ವರವಾಗಿದೆ : ಶಾಸಕ ಪ್ರಭು ಚೌವ್ಹಾಣ್

ಭಾಲ್ಕಿ : ಬಸವಲಿಂಗ ಪಟ್ಟದ್ದೇವರ ಅವಿರತ ಶ್ರಮದಿಂದ ಗಡಿ ಭಾಗದಲ್ಲಿ ಬೆಳೆಯುತ್ತಿರುವ ಗುರುಕುಲ ಶಿಕ್ಷಣ ಸಂಸ್ಥೆ ಈ ಭಾಗದ ವಿದ್ಯಾರ್ಥಿಗಳ ಪಾಲಿಗೆ ವರವಾಗಿದೆ ಎಂದು ಶಾಸಕ ಪ್ರಭು ಚವ್ಹಾಣ ಹೇಳಿದರು.
ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಎಸೆಸೆಲ್ಸಿ ಸಾಧಕ ವಿದ್ಯಾರ್ಥಿಗಳ ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುರುಕುಲ ಶಾಲೆ ಗುಣಾತ್ಮಕ ಶಿಕ್ಷಣ ಹಾಗೂ ಉತ್ತಮ ಸಂಸ್ಕಾರಕ್ಕೆ ಪ್ರಸಿದ್ಧಿಯಾಗಿದೆ ಎಂದು ಹೇಳಿದರು.
ಶಾಲೆಯ ವಿದ್ಯಾರ್ಥಿ ಆನಂದ್ ಎಸೆಸೆಲ್ಸಿ ಪರೀಕ್ಷೆಯಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿರುವುದು ಈ ಭಾಗದ ಕೀರ್ತಿಯನ್ನು ರಾಜ್ಯಮಟ್ಟಕ್ಕೆ ತಂದುಕೊಟ್ಟಿದೆ. ಜೊತೆಗೆ 130ಕ್ಕೂ ಅಧಿಕ ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ಶ್ಲಾಘನೀಯ ಎಂದು ಹೇಳಿದರು.
ಈ ಭಾಗದ ಅಭಿವೃದ್ಧಿಗೆ ಶಿಕ್ಷಣವೇ ಮೂಲ ಎಂಬುದನ್ನು ಮನಗಂಡಿದ್ದ ಪಟ್ಟದ್ದೇವರು ಅನೇಕ ಸಂಕಷ್ಟಗಳನ್ನು ಎದುರಿಸಿ ಗುರುಕುಲ ಎಂಬ ಶ್ರೇಷ್ಠ ಶಿಕ್ಷಣ ಕೇಂದ್ರವನ್ನು ನಿರ್ಮಿಸಿದ್ದಾರೆ. ವಿದ್ಯಾರ್ಥಿಗಳು ಅವರ ಪರಿಶ್ರಮದ ಫಲವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗುರುಕುಲ ಸಂಸ್ಥೆಯ ವಿದ್ಯಾರ್ಥಿಗಳು ಪ್ರತಿವರ್ಷ ನೀಟ್, ಐಐಟಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿ ವೈದ್ಯರು ಮತ್ತು ಇಂಜಿನಿಯರ್‌ಗಳಾಗಿ ಹೊರಹೊಮ್ಮುತ್ತಿರುವುದು ಹೆಮ್ಮೆಯ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಅನುಭವ ಮಂಟಪ ಟ್ರಸ್ಟ್ ನ ಅಧ್ಯಕ್ಷ ಬಸವಲಿಂಗ ಪಟ್ಟದೇವರು ದಿವ್ಯ ಸಾನಿಧ್ಯ ವಹಿಸಿದ್ದರು. ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದೇವರು ನೇತೃತ್ವ ವಹಿಸಿದ್ದರು. ಪ್ರಮುಖರಾದ ಶಿವರಾಜ್ ಅಲ್ಮಾಜೆ, ಪ್ರವೀಣ್ ಕಾರಬಾರಿ, ರಾಮಶೆಟ್ಟಿ ಪನ್ನಾಳೆ, ಪೃಥ್ವಿ ಪವಾರ್, ನಾಗರಾಜ್ ಬಿರಾದಾರ್, ಅರವಿಂದ್ ಮೇತ್ರೆ, ಶರಣಪ್ಪ ಪಾಟೀಲ್, ಸಂಜು ರೆಡ್ಡಿ, ಪ್ರವೀಣ್ ಖಂಡಾಳೆ ಹಾಗೂ ರಾಜಕುಮಾರ್ ಮೋರಗೆ ಸೇರಿದಂತೆ ಇತರರು ಇದ್ದರು.






