ಭಾಲ್ಕಿ | ವೈಜ್ಞಾನಿಕ ಆಧಾರಿತ ಕೃಷಿಯಿಂದ ಅಧಿಕ ಇಳುವರಿ ಸಾಧ್ಯ : ಡಾ.ಆರ್.ಎಲ್.ಜಾಧವ್

ಭಾಲ್ಕಿ : ಕಬ್ಬು ವಾಣಿಜ್ಯ ಬೆಳೆಯಾಗಿದ್ದು,ಕಬ್ಬಿನ ಪ್ರತಿಯೊಂದು ಭಾಗವು ಲಾಭದಾಯಕವಾಗಿರುವ ಕಾರಣ ರೈತರು ವೈಜ್ಞಾನಿಕ ಆಧಾರಿತ ಕೃಷಿಯಿಂದ ಅಧಿಕ ಇಳುವರಿ ಪಡೆಯಲು ಸಾಧ್ಯ ಎಂದು ಎಆರ್‌ಎಸ್ ವಿಜ್ಞಾನಿ ಡಾ.ಆರ್.ಎಲ್.ಜಾಧವ್ ಅವರು ಅಭಿಪ್ರಾಯಪಟ್ಟರು.
ಭಾಲ್ಕಿ ತಾಲೂಕಿನ ಕಣಜಿ ಗ್ರಾಮದ ಶೇಷರಾವ್ ಕಣಜಿ ಅವರ ಹೊಲದಲ್ಲಿ ಬೀದರ್ ನ ಕೃಷಿ ತಂತ್ರಜ್ಞರ ಸಂಸ್ಥೆ ಮತ್ತು ಪ್ರಗತಿಪರ ರೈತ ಶೇಷರಾವ ಕಣಜಿಕರ್ ಅವರ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡ ಕಬ್ಬಿನ ಬೆಳೆ ಚರ್ಚಾಕೂಟ, ಕಡಿಮೆ ಖರ್ಚಿನಲ್ಲಿ ಜಾಸ್ತಿ ಇಳುವರಿ ಮತ್ತು 2025-25ನೇ ಸಾಲಿನ ರೈತ, ರೈತ ಮಹಿಳೆಯರಿಗಾಗಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಬ್ಬಿನ ಅಧಿಕ ಇಳುವರಿಗಾಗಿ ಕ್ಯಾಲ್ಸಿಯಂ ಪ್ರಮಾಣ ಹೊಂದಿದ ಕಡಿಮೆ ಬೆಲೆಯಲ್ಲಿ ದೊರಕುವ ಟಿಎಸ್‌ಪಿ ಗೊಬ್ಬರ ಬಳಸಬೇಕು. ಮೇಲ್ಭಾಗದ ಎಲೆಗಳು ಬಿಟ್ಟು ಕೆಳಬಾಗದ ಎಲೆಗಳಿಂದ ಕಬ್ಬು ಕಟ್ಟಬೇಕು. ಯಾವುದೇ ಕಾರಣಕ್ಕೂ ರೈತರು ಕಬ್ಬಿನ ವಾಡಿ ಸುಡಬಾರದು. ರೈತರು ತಾವು ಬೆಳೆಯುವ ಬೆಳೆಗಳ ಗುಣಧರ್ಮ ಅರಿತು ಬೆಳೆ ಬೆಳೆಸಿದರೆ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಬಹುದು ಎಂದು ಅವರು ಸಲಹೆ ನೀಡಿದರು.
ನಿವೃತ್ತ ವಿಜ್ಞಾನಿ ಡಾ.ಸಿ.ಆರ್.ಕೊಂಡಾ ಅವರು ಮಾತನಾಡಿ, ಜಿಪ್ಸಂ ಗೊಬ್ಬರ ಮತ್ತು ಬೀಜೋಪಚಾರ ಮೂಲಕ ಭೂಮಿಯ ಫಲವತ್ತತೆ ಕಾಪಾಡಿಕೊಂಡು ಸಕಾಲದಲ್ಲಿ ಕಬ್ಬಿನ ನಾಟಿ ಮಾಡಿದಲ್ಲಿ ಅಧಿಕ ಇಳುವರಿ ಪಡೆಯಬಹುದು ಎಂದು ಹೇಳಿದರು.
ಕೃಷಿ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ಅವರು ಮಾತನಾಡಿ, ಸಾವಯವ ಗೊಬ್ಬರದೊಂದಿಗೆ ರಾಸಾಯನಿಕ ಗೊಬ್ಬರ ಬಳಸುವುದು ಅಗತ್ಯವಾಗಿದೆ. ರೈತರು ಹುಲ್ಲು ಸಾಯಿಸುವ ಔಷಧ ಸಿಂಪರಣೆ ಮಾಡುವುದರಿಂದ ಮಣ್ಣಿನ ಫಲವತ್ತತೆ ಕ್ಷೀಣಿಸುತ್ತಿದೆ. ಯಾವುದೇ ಕಾರಣಕ್ಕೂ ಹುಲ್ಲು ಸಾಯಿಸುವ ಔಷಧ ಬಳಸಬಾರದು ಎಂದರು.
ಕಲಬುರಗಿ ಕೃಷಿ ಕಾಲೇಜಿನ ನಿವೃತ್ತ ಡೀನ್ ಡಾ.ಸುರೇಶ್ ಪಾಟೀಲ್ ಹಾಗೂ ಬೀದರ್ ನ ಕೆವಿಕೆಯ ನಿವೃತ್ತ ಮುಖ್ಯಸ್ಥ ಡಾ.ರವಿ ದೇಶಮುಖ ಅವರು ರೈತರೊಂದಿಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ರೈತ ಸಂಘದ ತಾಲೂಕಾಧ್ಯಕ್ಷ ಬಾಬುರಾವ್ ಜೋಳದಾಪಕೆ, ಪ್ರಗತಿಪರ ರೈತರಾದ ಮಾಣಿಕ್ ದೇಶಮುಖ್, ಕರಬಸಯ್ಯ ಸಿಂದಬಂದಗಿ, ಶೇಷರಾವ್ ಕಣಜಿಕರ್, ರೈತ ಸಂಘದ ಕಾರ್ಯದರ್ಶಿ ದಯಾನಂದ್ ಸ್ವಾಮಿ, ರಾಜಕುಮಾರ್ ಎಡಿಎ,ತೋಟಗಾರಿಕೆ ಕಾಲೇಜಿನ ಡಾ.ರಾಜಕುಮಾರ್ ಗೌಳಿ, ಸುಭಾಷರಾವ್ ಕಣಜಿಕರ್, ಸಂಜೀವಕುಮಾರ್ ಕಣಜಿಕರ್, ಭಾವುರಾವ್ ಪಾಟೀಲ್, ಮಲ್ಲಿಕಾರ್ಜುನ್ ಬಿರಾದಾರ್, ಹಣಮಂತರಾವ್ ಪಾಟೀಲ್, ಚನ್ನಬಸಪ್ಪ ಪಾಟೀಲ್,ಅನೀಲ್ ರಂಜೇರಿ ಹಾಗೂ ದಿಲೀಪ್ ಪಾಟೀಲ್ ಸೇರಿದಂತೆ ಜಿಲ್ಲಾ ಕಬ್ಬು ಬೆಳೆಗಾರರು, ರೈತರು ಪಾಲ್ಗೊಂಡಿದ್ದರು.







