Bhalki | ರೈತರಿಗೆ ನ್ಯಾಯ ಸಿಗದಿದ್ದರೆ ಕಾನೂನು ಹೋರಾಟ: ಮಹೇಶ್ ರಾಚೋಟೆ ಎಚ್ಚರಿಕೆ

ಭಾಲ್ಕಿ: ಅನ್ನದಾತ ರೈತರ ಹಕ್ಕುಗಳನ್ನು ಕಡೆಗಣಿಸಿ ಅವರ ಬದುಕಿನೊಂದಿಗೆ ಚೆಲ್ಲಾಟವಾಡಲು ಯಾರಿಗೂ ಅವಕಾಶವಿಲ್ಲ. ರೈತರಿಗೆ ನ್ಯಾಯ ದೊರಕಿಸಿಕೊಡಲು ವಕೀಲರ ಸಮುದಾಯ ಕಾನೂನು ಹೋರಾಟಕ್ಕೂ ಸಿದ್ಧವಿದೆ ಎಂದು ಭಾಲ್ಕಿ ವಕೀಲರ ಸಂಘದ ಅಧ್ಯಕ್ಷ ಮಹೇಶ್ ರಾಚೋಟೆ ಎಚ್ಚರಿಕೆ ನೀಡಿದರು.
ನಗರದಲ್ಲಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ವಕೀಲರ ಸಂಘದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿ ಟನ್ ಕಬ್ಬಿಗೆ 4 ಸಾವಿರ ರೂ. ಮುಂಗಡ ದರ ಹಾಗೂ 1 ಸಾವಿರ ರೂ. ಪ್ರೋತ್ಸಾಹಧನ ನೀಡಬೇಕು. ಹಳ್ಳಿಖೇಡ್ ಬಿಎಸ್ಎಸ್ಕೆ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಬೇಕು. ರೈತರ ಸಾಲ ಮನ್ನಾ ಮಾಡಿ, ಬಾಕಿ ಉಳಿದಿರುವ ಬೆಳೆ ವಿಮೆ ಹಣವನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂಬ ರೈತರ ಪ್ರಮುಖ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಈಡೇರಿಸಬೇಕು ಎಂದು ಆಗ್ರಹಿಸಿದರು.
ರೈತರ ಬೇಡಿಕೆಗಳು ಕೇವಲ ಮನವಿಗಳಲ್ಲ; ಅವು ಅವರ ಬದುಕು, ದುಡಿಮೆ ಮತ್ತು ಹಕ್ಕುಗಳಿಗೆ ಸಂಬಂಧಿಸಿದ ಗಂಭೀರ ವಿಚಾರಗಳಾಗಿವೆ. ಆಡಳಿತ ನಡೆಸುವವರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಅನ್ನದಾತನಿಗೆ ಅನ್ಯಾಯವಾದಾಗ ಕಾನೂನು ಮೂಕಪ್ರೇಕ್ಷಕನಾಗಿ ಉಳಿಯುವುದಿಲ್ಲ. ನ್ಯಾಯಾಲಯದ ಗಮನ ಸೆಳೆಯುವ ಸಾಮರ್ಥ್ಯ ವಕೀಲರಿಗಿದೆ. ರೈತರಿಗೆ ನ್ಯಾಯ ಸಿಗದಿದ್ದರೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿ, ಸಂಬಂಧಪಟ್ಟವರನ್ನು ನ್ಯಾಯಾಲಯದ ಮುಂದೆ ಉತ್ತರದಾಯಿಗಳನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.
ರೈತರ ಹಕ್ಕುಗಳ ರಕ್ಷಣೆ ಕೇವಲ ಹೋರಾಟದ ವೇದಿಕೆಗೆ ಸೀಮಿತವಾಗಬಾರದು. ಅಗತ್ಯ ಬಿದ್ದರೆ ನ್ಯಾಯಾಂಗದ ಮೂಲಕವೂ ಹೋರಾಟ ನಡೆಸಿ ಅನ್ನದಾತರಿಗೆ ನ್ಯಾಯ ದೊರಕಿಸಿಕೊಡಲು ವಕೀಲರ ಸಂಘ ಬದ್ಧವಾಗಿದೆ ಎಂದು ತಿಳಿಸಿದರು.






