ಭಾಲ್ಕಿ | ಅನಧಿಕೃತ ಕಾಲೇಜಿನ ಮಾನ್ಯತೆ ರದ್ದುಪಡಿಸಲು ಆಗ್ರಹಿಸಿ ಮನವಿ

ಭಾಲ್ಕಿ: ನಗರದಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಮಹಾತ್ಮ ಗಾಂಧಿ ಪದವಿ ಪೂರ್ವ ಕಾಲೇಜಿನ ಮಾನ್ಯತೆಯನ್ನು ತಕ್ಷಣವೇ ರದ್ದುಪಡಿಸಿ, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ತಹಸೀಲ್ದಾರ್ ಮೂಲಕ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಮನವಿ ಸಲ್ಲಿಸಿದೆ.
ಮನವಿಯಲ್ಲಿ, ಕಾಲೇಜು ಕೇವಲ ದಾಖಲೆಗಳಲ್ಲಿ ಮಾತ್ರ ಅಸ್ತಿತ್ವದಲ್ಲಿದ್ದು, ಸ್ವಂತ ಅಥವಾ ಬಾಡಿಗೆ ಕಟ್ಟಡ, ಅಗತ್ಯ ಮೂಲಸೌಕರ್ಯ, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳೇ ಇಲ್ಲದೆ ನಕಲಿ ರೀತಿಯಲ್ಲಿ ನಡೆಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಬೇರೆ ಶಾಲೆಯ ಗೋಡೆಗೆ ಕಾಲೇಜಿನ ಬೋರ್ಡ್ ಅಳವಡಿಸಿ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ದೂರಲಾಗಿದೆ.
ಈ ಪ್ರಕರಣದಲ್ಲಿ ಕೆಲವು ಶಿಕ್ಷಣ ಇಲಾಖೆ ಅಧಿಕಾರಿಗಳ ಪಾತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಸಂಘಟನೆ, ಉನ್ನತ ಮಟ್ಟದ ಅಧಿಕಾರಿಗಳ ತಂಡದಿಂದ ಸ್ಥಳ ಪರಿಶೀಲನೆ ನಡೆಸಿ ಕಾಲೇಜಿನ ಮಾನ್ಯತೆ ರದ್ದುಪಡಿಸುವ ಜೊತೆಗೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಸಂಘಟನೆ ತಾಲೂಕು ಸಂಚಾಲಕ ಪ್ರವೀಣ್ ಮೊರೆ, ಪ್ರಮುಖರಾದ ತುಕಾರಾಮ್ ಕಾಸ್ಲೆ, ರಾಜಕುಮಾರ್ ಹಾಗೂ ಶಶಿಕಾಂತ್ ಸೇರಿದಂತೆ ಹಲವರು ಇದ್ದರು.




