Bhalki | ಕಾರಂಜಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲು ಸಿದ್ರಾಮಪ್ಪ ಆಣದೂರೆ ಆಗ್ರಹ

ಭಾಲ್ಕಿ : ಪ್ರಸಕ್ತ ವರ್ಷ ಮಳೆ ಕೊರತೆಯಿಂದ ಬೆಳೆ ಕಳೆದುಕೊಂಡಿರುವ ರೈತರು ಆತಂಕದಲ್ಲಿದ್ದು, ಸಂಕಷ್ಟದಲ್ಲಿರುವ ರೈತರಿಗೆ ಜನ-ಜಾನುವಾರುಗಳ ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ ಎದುರಾಗಿದೆ. ರೈತರು ಸಾಕುತ್ತಿರುವ ಜಾನುವಾರುಗಳಿಗೆ ಮೇವಿನ ಕೊರತೆಯಾಗಿರುವುದರಿಂದ ನೀರಿನ ಸೌಲಭ್ಯಕ್ಕಾಗಿ ಕಾರಂಜಾ ಜಲಾಶಯದಿಂದ ನದಿ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಸಿದ್ರಾಮಪ್ಪ ಆಣದೂರೆ ಆಗ್ರಹಿಸಿದರು.
ನಗರದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ವತಿಯಿಂದ ಸೋಮವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಅನುಕೂಲಕ್ಕಾಗಿ ಕಾರಂಜಾ ಜಲಾಶಯದ ನೀರನ್ನು ನದಿ ಕಾಲುವೆಗಳಿಗೆ ಹರಿಸಲು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಜನ-ಜಾನುವಾರುಗಳ ಕುಡಿಯುವ ನೀರಿನ ಅಗತ್ಯ ಪೂರೈಸುವುದರ ಜೊತೆಗೆ ರೈತರ ಸಹಸ್ರಾರು ಹೆಕ್ಟೇರ್ ಪ್ರದೇಶದ ಬೆಳೆಗಳಿಗೆ ಸಂಜೀವಿನಿಯಾಗಿರುವ ಕಾರಂಜಾ ಜಲಾಶಯವು ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದಾಗಿ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿಲ್ಲ. ಇದರಿಂದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆತಂಕದ ಜೊತೆಗೆ ಜಾನುವಾರುಗಳಿಗೆ ಮೇವಿನ ಕೊರತೆಯೂ ಉಂಟಾಗಿದೆ. ಕಾಲುವೆಗಳಿಗೆ ನೀರು ಹರಿಸಿದರೆ ರೈತರು ಜಾನುವಾರುಗಳಿಗಾಗಿ ಮೇವು ಬೆಳೆಸಿಕೊಳ್ಳಲು ಅನುಕೂಲವಾಗಲಿದೆ ಎಂದರು.
ಕೆಲವು ಪರಿಣಿತರ ಪ್ರಕಾರ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಕಾರಂಜಾ ಜಲಾಶಯದಲ್ಲಿ ನೀರು ಸಂಗ್ರಹಿಸಿಡುವುದು ಅಗತ್ಯ ಎಂಬ ಅಭಿಪ್ರಾಯವೂ ಸರಿಯಾಗಿದೆ. ಆದರೆ, ಜಾನುವಾರುಗಳಿಗೆ ಮೇವು ಸಿಗದೆ ರೈತರು ದನಕರುಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ರೈತರ ಹಿತದೃಷ್ಟಿಯಿಂದ ಕಾಲುವೆಗಳಿಗೆ ನೀರು ಹರಿಸುವುದು ಸೂಕ್ತ ಎಂಬುದು ರೈತ ಸಂಘಟನೆಗಳ ನಿರ್ಧಾರವಾಗಿದೆ ಎಂದು ಹೇಳಿದರು.
ಬೀದರ್ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಸರ್ಕಾರ ಘೋಷಿಸಿರುವುದು ಸಂತೋಷದ ವಿಷಯವಾಗಿದೆ. ಆದರೆ, ಬರ ಪರಿಹಾರವಾಗಿ 2,500 ರೂ. ಘೋಷಿಸಿರುವುದು ರೈತರಿಗೆ ಮಾಡಿದ ಅಪಮಾನವಾಗಿದೆ. ಇದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಕನಿಷ್ಠ ಪ್ರತಿ ಎಕರೆಗೆ 25 ಸಾವಿರ ರೂ. ಬರ ಪರಿಹಾರ ಘೋಷಿಸಬೇಕು. ರೈತರ ಪ್ರತಿ ಟನ್ ಕಬ್ಬಿಗೆ 5,500 ರೂ. ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ದಸರಾ ಹಬ್ಬದ ಮುನ್ನ ಕಾರಂಜಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸದಿದ್ದರೆ ಜಿಲ್ಲೆಯ ರೈತರೊಂದಿಗೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಬಾಬುರಾವ್ ಜೋಳದಾಪ್ಕೆ, ರೈತ ಸಂಘದ ರಾಜ್ಯ ಪ್ರತಿನಿಧಿ ಕೇಶವರಾವ್ ಕಣಜಿಕರ್, ಉಪಾಧ್ಯಕ್ಷ ರಾಜಕುಮಾರ್ ತೇಲಂಗ್, ಮಹಿಳಾ ಘಟಕದ ಅಧ್ಯಕ್ಷೆ ಸುವರ್ಣಾ ಬಳತೆ, ಕಾರ್ಯಾಧ್ಯಕ್ಷೆ ವನಿತಾಬಾಯಿ ಮಾಶಟ್ಟೆ, ಹಸಿರು ಸೇನೆಯ ತಾಲೂಕು ಅಧ್ಯಕ್ಷ ಸೋಮನಾಥ್ ಟೋಕರೆ, ಪ್ರಮುಖರಾದ ಪ್ರಭು ರಾಮಶೆಟ್ಟಿ ಹಾಗೂ ಸುರೇಶ್ ಭೈರೆ ಉಪಸ್ಥಿತರಿದ್ದರು.






