Bhalki | ವಿದ್ಯಾರ್ಥಿಗಳು ಭಾರತೀಯತೆಯನ್ನು ಮೈಗೂಡಿಸಿಕೊಳ್ಳಬೇಕು : ಮಹೇಶ್ ರಾಚೋಟೆ
ಕಾನೂನು ಅರಿವು, ಶಿಕ್ಷಣ ಕುರಿತು ಕಾರ್ಯಾಗಾರ

ಭಾಲ್ಕಿ: ಪ್ರತಿಯೊಬ್ಬ ವಿದ್ಯಾರ್ಥಿಯೂ ಭಾರತೀಯತೆಯನ್ನು ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಸುರಕ್ಷಿತವಾಗಿ ಕಲಿಯುವ, ಆತ್ಮವಿಶ್ವಾಸದಿಂದ ಬೆಳೆಯುವ ಹಾಗೂ ಗೌರವಯುತವಾಗಿ ಬದುಕುವ ವಾತಾವರಣ ನಿರ್ಮಿಸುವುದು ಎಲ್ಲರ ಸಾಮೂಹಿಕ ಹೊಣೆಗಾರಿಕೆಯಾಗಿದೆ ಎಂದು ನ್ಯಾಯವಾದಿ ಮಹೇಶ್ ರಾಚೋಟೆ ಹೇಳಿದರು.
ತಾಲೂಕಿನ ತಳವಾಡ್ (ಕೆ) ಗ್ರಾಮದ ಅಲ್ಲಮ ಪ್ರಭು ಬಿ.ಎಡ್. ಶಿಕ್ಷಣ ಮಹಾವಿದ್ಯಾಲಯ, ಬೀದರ್ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಅಖಿಲ ಭಾರತೀಯ ಶರಣ ಸಮನ್ವಯ ವೇದಿಕೆ ಕರ್ನಾಟಕದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ‘ಕಾನೂನು ಅರಿವು ಮತ್ತು ಶಿಕ್ಷಣ’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪರಸ್ಪರ ತೊಂದರೆ ನೀಡುವುದರಿಂದ ಅವರ ಆತ್ಮವಿಶ್ವಾಸ, ಮಾನಸಿಕ ನೆಮ್ಮದಿ ಹಾಗೂ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗುತ್ತದೆ. ಇಂತಹ ಘಟನೆಗಳನ್ನು ತಡೆಗಟ್ಟಲು ಶಿಕ್ಷಣ ಸಂಸ್ಥೆಗಳು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ, ಕಿರುಕುಳ ವಿರೋಧಿ ಸಮಿತಿಗಳನ್ನು ರಚಿಸಿ, ಸುರಕ್ಷಿತ ದೂರು ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಹೇಳಿದರು.
ಕಾರ್ಯಾಗಾರದ ಸಂಯೋಜಕಿ ಡಾ. ಪಲ್ಲವಿ ಪಾಟೀಲ್ ಸೇಡಂ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಂದ ಹಾಗೂ ದುಷ್ಕೃತ್ಯಗಳಿಂದ ದೂರವಿರಬೇಕು. ಇಂತಹ ಘಟನೆಗಳು ಕಂಡುಬಂದಾಗ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಹೊಸ ವಿದ್ಯಾರ್ಥಿಗಳನ್ನು ಪ್ರೀತಿ, ಗೌರವ ಹಾಗೂ ಸ್ನೇಹದಿಂದ ಸ್ವಾಗತಿಸಬೇಕು ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ರೋಹಿತ್ ಮೂಲಗೆ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕಥೆ, ಏಕಾಭಿನಯ ಹಾಗೂ ಕಿರು ರೂಪಕಗಳ ಮೂಲಕ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುವುದರ ವಿರುದ್ಧ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪನ್ಯಾಸಕ ಲಕ್ಷ್ಮರೆಡ್ಡಿ ವಹಿಸಿದ್ದರು. ಈ ಸಂದರ್ಭದಲ್ಲಿ ನೀಲಾಂಬಿಕಾ, ರಮೇಶ್, ಈರಶೆಟ್ಟಿ ಬೂಯ್ಯಾ, ಗಣೇಶ್ ಗರುಡ ಹಾಗೂ ಸುಭಾಷ್ ದರ್ಗಾ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಶಿಕುಮಾರ್ ಭಾವಿಕಟ್ಟೆ ಪ್ರಾರ್ಥಿಸಿದರು. ಸಹನಾ ಸ್ವಾಗತಿಸಿದರು. ಮಹೇಶ್ ನಿರೂಪಿಸಿದರು. ಮಧು ವಂದಿಸಿದರು.






