ಭಾಲ್ಕಿ | ದೇಶದ ಭವಿಷ್ಯ ರೂಪಿಸುವವರು ಶಿಕ್ಷಕರಾಗಿದ್ದಾರೆ : ಗುರುಬಸವ ಪಟ್ಟದೇವರು

ಭಾಲ್ಕಿ: ಶಿಕ್ಷಕರು ರಾಷ್ಟ್ರ ನಿರ್ಮಾಣದ ಭದ್ರ ಬುನಾದಿ ಹಾಕುವ ಕಾರ್ಯ ಮಾಡುತ್ತಿದ್ದಾರೆ ಎಂದು ಗುರುಬಸವ ಪಟ್ಟದೇವರು ಹೇಳಿದ್ದಾರೆ.
ನಗರದಲ್ಲಿ ಗುರುವಾರ ನಡೆದ ವಿಶ್ವಗುರು ಬಸವಣ್ಣನವರ ಜಯಂತಿ, ವಚನ ಜಾತ್ರೆ–2026, ಡಾ. ಚನ್ನಬಸವ ಪಟ್ಟದೇವರ 37ನೇ ಸ್ಮರಣೋತ್ಸವ ಹಾಗೂ ನಾಡೋಜ ಡಾ. ಬಸವಲಿಂಗ ಪಟ್ಟದೇವರ ಅಮೃತ ಮಹೋತ್ಸವದ ಅಂಗವಾಗಿ 75 ಶಿಕ್ಷಕರಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಕ್ಷಕರು ದೇಶದ ಭವಿಷ್ಯ ರೂಪಿಸುವ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಸೈನಿಕರು ಗಡಿ ಕಾಯುವಂತೆ ಶಿಕ್ಷಕರು ಉತ್ತಮ ನಾಗರಿಕರನ್ನು ನಿರ್ಮಿಸುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತಾರೆ ಎಂದು ಅವರು ಹೇಳಿದರು.
ಶಿಕ್ಷಕ ವೃತ್ತಿಯ ಕುರಿತು ಪೂಜ್ಯರಿಗೆ ಅಪಾರ ಗೌರವವಿದೆ ಎಂದು ಹೇಳಿದ ಅವರು, ಅವರ ಆಶಯದಂತೆ ಅನೇಕ ಶಿಕ್ಷಕರಿಗೆ ಸನ್ಮಾನ ನೀಡಲಾಗುತ್ತಿರುವುದು ಸಂತೋಷದ ವಿಷಯ ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ದಿವ್ಯಸಾನಿಧ್ಯ ವಹಿಸಿದ ರಾಜೇಶ್ವರದ ಶಿವಾಚಾರ್ಯರು ಮಾತನಾಡಿ, ಶಿಕ್ಷಕರು ಗುರುಸ್ವರೂಪರಾಗಿದ್ದು, ಅವರ ಮಾರ್ಗದರ್ಶನದಿಂದ ಮಕ್ಕಳ ಭವಿಷ್ಯ ರೂಪುಗೊಳ್ಳುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ದಾಕ್ಷಾಯಣಿ ತಾಯಿ ಅಧ್ಯಕ್ಷತೆ ವಹಿಸಿದ್ದರು. ಸಾಯಗಾಂವದ ಶಿವಾನಂದ್ ಮಹಾಸ್ವಾಮಿ, ಹುಡಗಿಯ ಚನ್ನಮಲ್ಲ ಮಹಾಸ್ವಾಮಿ, ಬಸವರಾಜ್ ದೇಶಮುಖ, ಅನೀಲ್ ಸಿಂಧೆ, ಉಮಾ ಖಂಡ್ರೆ, ಶರದ್ ಮಹಾರುದ್ರಪ್ಪ ಸಿರ್ಸೆ, ಎಲ್.ಜಿ.ಗುಪ್ತಾ, ಸಂತೋಷ್ ಖಂಡ್ರೆ, ಸಿದ್ರಾಮಯ್ಯ ಸ್ವಾಮಿ, ಸಂಜುಕುಮಾರ್ ಜ್ಯಾಂತೆ, ಮಲ್ಲಿಕಾರ್ಜುನ್ ಹಲ್ಮಂಡಗೆ, ಸೋಮನಾಥ್ ಮುದ್ದಾ, ರೋಹಿತ್ ವೈರಾಗೆ, ವಿನೋದ್ ಜಗತಾಪ್, ಮಹೇಶ್ ಧನ್ನೂರೆ, ಸುಧೀರ್ ನಾಯಕ್, ವಸಂತ್ ಪಾಟೀಲ್, ಕಾಶಿನಾಥ್ ಚಲ್ವಾ, ಸುಭಾಷ್ ಹುಲಸೂರೆ ಹಾಗೂ ತಿಪ್ಪಣ್ಣ ಶಿವಪುರೆ ಸೇರಿದಂತೆ ಅನೇಕರು ಇದ್ದರು. ಚಂದ್ರಕಾಂತ್ ಬಿರಾದಾರ್ ನಿರೂಪಿಸಿದರು. ಪ್ರೇಮಲತಾ ಶಿವರುದ್ರಯ್ಯ ಸ್ವಾಮಿ ಶರಣು ಸಮರ್ಪಣೆ ಮಾಡಿದರು.






