Bhalki | ಮಹಿಳಾ ಶಿಕ್ಷಣವು ರಾಷ್ಟ್ರದ ಪ್ರಗತಿಗೆ ಮಹತ್ವದ ಕೊಡುಗೆ: ಡಾ.ಕಿರಣ್ ಸಜ್ಜನಶೆಟ್ಟಿ
'ಮಹಿಳೆ ಮತ್ತು ಶಿಕ್ಷಣ’ ಕಾರ್ಯಾಗಾರ

ಭಾಲ್ಕಿ: ಮಹಿಳಾ ಶಿಕ್ಷಣವು ಕುಟುಂಬ, ಸಮಾಜ ಹಾಗೂ ರಾಷ್ಟ್ರದ ಪ್ರಗತಿಗೆ ಮಹತ್ವದ ಕೊಡುಗೆ ನೀಡುತ್ತದೆ ಎಂದು ಡಾ. ಕಿರಣ್ ಸಜ್ಜನಶೆಟ್ಟಿ ಹೇಳಿದರು.
ತಾಲೂಕಿನ ತಳವಾಡ (ಕೆ) ಗ್ರಾಮದ ಅಲ್ಲಮ ಪ್ರಭು ಬಿ.ಎಡ್. ಶಿಕ್ಷಣ ಮಹಾವಿದ್ಯಾಲಯದಲ್ಲಿ ಬೀದರ್ ವಿಶ್ವವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಅಖಿಲ ಭಾರತೀಯ ಶರಣ ಸಮನ್ವಯ ವೇದಿಕೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ಮಹಿಳೆ ಮತ್ತು ಶಿಕ್ಷಣ’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗುಣಮಟ್ಟದ ಶಿಕ್ಷಣದಿಂದ ಮಹಿಳೆಯರಲ್ಲಿ ಆತ್ಮವಿಶ್ವಾಸ, ಸ್ವಾವಲಂಬನೆ ಹಾಗೂ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ವೃದ್ಧಿಯಾಗುತ್ತದೆ. ಮಹಿಳೆಯರು ಶಿಕ್ಷಣ ಪಡೆದು ಸಬಲರಾದಾಗ ಕುಟುಂಬದ ಅಭಿವೃದ್ಧಿಯೊಂದಿಗೆ ಸಮಾಜ ಮತ್ತು ರಾಷ್ಟ್ರದ ಪ್ರಗತಿಗೂ ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಡಾ. ರಾಜೇಶ್ವರಿ ಪಾಟೀಲ್ ಮಾತನಾಡಿ, ಮಹಿಳಾ ಶಿಕ್ಷಣವು ಸಮಾನತೆಯ ಸಮಾಜ ನಿರ್ಮಾಣಕ್ಕೆ ಪೂರಕವಾಗಿದೆ ಎಂದರು.
ಡಾ. ಪಲ್ಲವಿ ಪಾಟೀಲ್ ಮಾತನಾಡಿ, ಗ್ರಾಮೀಣ ಹೆಣ್ಣುಮಕ್ಕಳಿಗೂ ಸಮಾನ ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸಬೇಕು. ಅವರು ಉನ್ನತ ಶಿಕ್ಷಣ ಪಡೆಯಲು ಹಾಗೂ ಉದ್ಯೋಗಾವಕಾಶಗಳನ್ನು ಬಳಸಿಕೊಳ್ಳಲು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಮಾಣಿಕರಾವ್ ಬಿ. ಪಾಂಚಾಳ್ ವಹಿಸಿದ್ದರು. ರಮೇಶ್ ಕುಟ್ಟಮಲ್ಲಗೆ, ಈರಶೆಟ್ಟಿ ಬೂಯ್ಯಾ, ರಮೇಶ್ ಲಿಂಬಾವೆ, ಸುಭಾಷ್ ಹಾಗೂ ಗಣೇಶ್ ಗರುಡ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಭಾಗ್ಯಶ್ರೀ ನಿರೂಪಿಸಿದರು. ಪ್ರೇಮ ವಂದಿಸಿದರು.






