Bidar | ಕುಂಬರವಾಡದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 1 ಕೋಟಿ ರೂ. ಮಂಜೂರು ಮಾಡಲು ಆಗ್ರಹ

ಬೀದರ್: ನಗರದ ಕುಂಬರವಾಡದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 1 ಕೋಟಿ ರೂ. ಅನುದಾನ ಮಂಜೂರು ಮಾಡುವಂತೆ ಹಾಗೂ ಸರ್ಕಾರಿ ಗೈರಾಣ ಜಾಗವನ್ನು ಎಸ್ಸಿ ಸಮುದಾಯಕ್ಕೆ ಮಂಜೂರು ಮಾಡುವಂತೆ ಆಗ್ರಹಿಸಿ ವೀರ ಕನ್ನಡಿಗರ ಸೇನೆ ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿತು.
ಮನವಿಯಲ್ಲಿ, ಮಹಾನಗರ ಪಾಲಿಕೆ ವ್ಯಾಪ್ತಿಯ ಕುಂಬರವಾಡದ ಸರ್ವೆ ನಂ. 51/1ರಲ್ಲಿರುವ 75 ಮತ್ತು 80 ವಿಸ್ತೀರ್ಣದ ಖಾಲಿ ಸರ್ಕಾರಿ ಗೈರಾಣ ಜಾಗದಲ್ಲಿ ಎಸ್ಸಿ ಸಮುದಾಯದವರು ಕಳೆದ 25 ವರ್ಷಗಳಿಂದ ಅಂಬೇಡ್ಕರ್ ಜಯಂತಿ, ಬುದ್ಧ ಪೂರ್ಣಿಮಾ, ವಿಜಯದಶಮಿ, ಮಹಾಪರಿನಿಬ್ಬಾಣ ಸೇರಿದಂತೆ ವಿವಿಧ ಸಾಮಾಜಿಕ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಲಾಗಿದೆ.
ಮೇ 18ರಂದು ಈ ಜಾಗದಲ್ಲಿದ್ದ ನೀಲಿ ಧ್ವಜವನ್ನು ಕಿತ್ತೆಸೆದ ಘಟನೆಗೆ ಸಂಬಂಧಿಸಿದಂತೆ ಎಸ್ಸಿ ಸಮುದಾಯದ ಮಹಿಳೆಯರು ವಿಡಿಯೊ ಸಾಕ್ಷ್ಯ ಸಮೇತ ಅಧಿಕಾರಿಗಳಿಗೆ ದೂರು ನೀಡಿದ್ದರೂ, ಇದುವರೆಗೆ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಸಂಘಟನೆ ಖಂಡಿಸಿದೆ.
ಅದೇ ಸರ್ಕಾರಿ ಗೈರಾಣ ಜಾಗದಲ್ಲಿ ಚರ್ಚ್, ಬೀರಲಿಂಗೇಶ್ವರ ದೇವಸ್ಥಾನ, ರಾಮ ಮಂದಿರ ಹಾಗೂ ಮಸೀದಿಗಳು ನಿರ್ಮಾಣಗೊಂಡಿವೆ. ಜಾಗ ಮಂಜೂರಾತಿಗಾಗಿ ಕುಂಬರವಾಡದ ಎಸ್ಸಿ ಸಮುದಾಯದವರು ಈಗಾಗಲೇ ಐದು ಬಾರಿ ಜಿಲ್ಲಾಡಳಿತಕ್ಕೆ ದಾಖಲೆಗಳೊಂದಿಗೆ ಮನವಿ ಸಲ್ಲಿಸಿದ್ದು, ಅವರ ಹೋರಾಟಕ್ಕೆ ಬೆಂಬಲ ಸೂಚಿಸಿ ಈ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಲಾಗಿದೆ.
ಸರ್ವೆ ನಂ. 51/1ರಲ್ಲಿರುವ 75 ಮತ್ತು 80 ವಿಸ್ತೀರ್ಣದ ಜಾಗವನ್ನು ಸಮುದಾಯಕ್ಕೆ ಮಂಜೂರು ಮಾಡುವುದರ ಜೊತೆಗೆ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 1 ಕೋಟಿ ರೂ. ಅನುದಾನ ಮಂಜೂರು ಮಾಡಲು ಜಿಲ್ಲಾಡಳಿತ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ವೀರ ಕನ್ನಡಿಗರ ಸೇನೆಯ ರಾಜ್ಯ ಸಂಚಾಲಕ ಡಾ. ಸುಬ್ಬಣ್ಣ ಕರಕನಳ್ಳಿ, ಜಿಲ್ಲಾಧ್ಯಕ್ಷ ಅಮರ್ ಪೂಜಾರಿ, ಜಿಲ್ಲಾ ಸಂಚಾಲಕ ಅಂಬಾದಾಸ್, ಜಿಲ್ಲಾ ಗೌರವಾಧ್ಯಕ್ಷ ಈಶ್ವರ್ ಬಡಿಗೇರ್, ಜಿಲ್ಲಾ ಉಪಾಧ್ಯಕ್ಷ ಬಸವರಾಜ್ ಜಡಗೆ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಗೋವಿಂದ್ ಪೂಜಾರಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮೋಹಿನ್ ಪಟೇಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬುರಾವ್ ಬಿಟ್ಟೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಶಿಧರ್ ಜ್ಯೋತಿ, ನಗರಾಧ್ಯಕ್ಷ ಪ್ರಶಾಂತ್ ಹೂಗಾರ್, ತಾಲ್ಲೂಕಾಧ್ಯಕ್ಷ ಗೌಸೋದ್ಧೀನ್, ತಾಲ್ಲೂಕು ಕಾರ್ಯದರ್ಶಿ ಜುಬೇರ್ ಪಾಶಾ ಇದ್ದರು.






