Bidar | ಕೊಹಿನೂರ್ ಹೋಬಳಿಯಲ್ಲಿ ಕೇವಲ 11 ದಿನಗಳಲ್ಲಿ ಶೇ.100 ರಷ್ಟು ಎಸ್‌ಐಆರ್ ಪ್ರಕ್ರಿಯೆ ಪೂರ್ಣ

ಬೀದರ್ : ಕೇವಲ 11 ದಿನಗಳಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಶೇ.100ರಷ್ಟು ಪೂರ್ಣಗೊಳಿಸಿದ ಬಿಎಲ್‌ಒ ಹಾಗೂ ಮೇಲ್ವಿಚಾರಕರನ್ನು ಬೀದರ್ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.
ಬಸವಕಲ್ಯಾಣ ತಾಲೂಕಿನ ಕೊಹಿನೂರ್ ಹೋಬಳಿಯ ಮತಗಟ್ಟೆ ಸಂಖ್ಯೆ-248ರ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಮತದಾರರ ಮಾಹಿತಿ ನಮೂನೆಗಳನ್ನು ಯಶಸ್ವಿಯಾಗಿ ವಿತರಿಸಿ, ಜಿಲ್ಲೆಯಲ್ಲೇ ಅತಿ ವೇಗವಾಗಿ ಶೇ.100ರಷ್ಟು ಡಿಜಿಟಲೀಕರಣ ಪ್ರಕ್ರಿಯೆ ಪೂರ್ಣಗೊಳಿಸಿದ ಸಾಧನೆಗೆ ಈ ತಂಡ ಪಾತ್ರವಾಗಿದೆ.
ಕೊಹಿನೂರ್ ಹೋಬಳಿಯ ಗ್ರಾಮ ಆಡಳಿತಾಧಿಕಾರಿ ಹಾಗೂ ಮತಗಟ್ಟೆ ಅಧಿಕಾರಿಗಳ ಮೇಲ್ವಿಚಾರಕರಾದ ದೇವರಾಜ್ ಮೈದೂರು ಅವರು ಸಮರ್ಪಕ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನ ನೀಡಿದರೆ, ಕೊಹಿನೂರ್ ವಾಡಿಯ ಅಂಗನವಾಡಿ ಕೇಂದ್ರದ ಸಹ ಶಿಕ್ಷಕಿ ಹಾಗೂ ಬಿಎಲ್‌ಒ ಸುಮಾ ಪಾಟೀಲ್ ಅವರು ಮನೆ ಮನೆಗೆ ತೆರಳಿ ಮತದಾರರಿಗೆ ನಮೂನೆಗಳನ್ನು ತಲುಪಿಸಿ ಡಿಜಿಟಲ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಅಧಿಕಾರಿಗಳ ಕರ್ತವ್ಯನಿಷ್ಠೆ, ಸಮಯಪಾಲನೆ, ಪರಿಶ್ರಮ ಹಾಗೂ ಕಾರ್ಯಕ್ಷಮತೆ ಶ್ಲಾಘನೀಯವಾಗಿದೆ. ಚುನಾವಣಾ ಆಯೋಗದ ನಿರ್ದೇಶನಗಳನ್ನು ಜವಾಬ್ದಾರಿ ಮತ್ತು ಸಮರ್ಪಣಾ ಮನೋಭಾವದಿಂದ ಸಮಯೋಚಿತವಾಗಿ ಅನುಷ್ಠಾನಗೊಳಿಸಿರುವ ನಿಮ್ಮ ಸೇವೆ ಇತರರಿಗೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಪ್ರಶಂಸಿಸಿ, ಮುಂದಿನ ಕಾರ್ಯಗಳಿಗೂ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ್ ಕರಾಳೆ, ಬಸವಕಲ್ಯಾಣ ಸಹಾಯಕ ಆಯುಕ್ತ ಪ್ರಕಾಶ್ ಕುದುರಿ, ತಹಶೀಲ್ದಾರ್ ಡಾ. ದತ್ತಾತ್ರೇಯ ಗಾದಾ, ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ಶಾಖೆಯ ಸತ್ಯದೀಪ್ ಸೇರಿದಂತೆ ಚುನಾವಣಾ ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.






