ಬೀದರ್ | ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆಯ ರಜತ್ ಮಹೋತ್ಸವ ಆಚರಿಸಲು ನಿರ್ಣಯ : ಜಿ.ನಂಜನಗೌಡ

ಬೀದರ್ : ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆಯ ರಜತ್ ಮಹೋತ್ಸವ ಆಚರಿಸಲು ನಿರ್ಣಯಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ರಾಜ್ಯಾಧ್ಯಕ್ಷ ಜಿ.ನಂಜನಗೌಡ ಅವರು ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತವು 2001 ರಲ್ಲಿ ಸೌಹಾರ್ದ ಸಹಕಾರಿ ಕಾಯ್ದೆ ಜಾರಿಗೆ ಬಂದ ನಂತರ 2002ರಲ್ಲಿ ಸಂಯುಕ್ತ ಸಹಕಾರಿ ನೋಂದಣಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಈ ಸಂಸ್ಥೆ ದೊಡ್ಡದಾಗಿ ಬೆಳೆದು ನಿಂತಿದೆ ಎಂದು ತಿಳಿಸಿದರು.
ಈ ಸಹಕಾರ ಸಂಘದಿಂದ ಬಡವರಿಗೆ ತುಂಬಾ ಸಹಾಯವಾಗುತ್ತಿದ್ದು, ನಿರುದ್ಯೋಗಿಗಳಿಗೆ ಆರ್ಥಿಕವಾಗಿ ಸಹಾಯ ಮಾಡುವ ಮೂಲಕ ಅವರನ್ನು ಸ್ವಯಂ ಉದ್ಯೋಗಿಗಳಾಗಿ ನಿರ್ಮಿಸುತ್ತಿದೆ ಎಂದರು.
ಬೀದರ್ ಜಿಲ್ಲೆಯಲ್ಲಿ ಒಟ್ಟು 169 ಸೌಹಾರ್ದ ಸಹಕಾರಿ ಸಂಸ್ಥೆಗಳಿದ್ದು, ಒಟ್ಟು 43,870 ಸದಸ್ಯರಿದ್ದಾರೆ. 270.42 ಕೋಟಿ ರೂ. ದುಡಿಯುವ ಬಂಡವಾಳವಿದ್ದು, 10.98 ಕೋಟಿ ಷೇರು ಬಂಡವಾಳವಿದೆ. 244.32 ಕೋಟಿ ರೂ. ಠೇವಣಿಯಾಗಿದೆ. 251.39 ಕೋಟಿ ರೂ. ಸಾಲ ನೀಡಲಾಗಿದೆ. ಹಾಗೆಯೇ 3.70 ಕೋಟಿ ರೂ. ಲಾಭ ಹೊಂದಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸಂಸ್ಥೆಯು ಈ ವರ್ಷ 25ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಸೌಹಾರ್ದ ಸಹಕಾರಿ ರಜತ ಮಹೋತ್ಸವ ವರ್ಷ ಆಚರಿಸಲು ನಿರ್ಣಯಿಸಲಾಗಿದ್ದು, ರಜತ್ ಮಹೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸದರು.
ಈ ಸಂದರ್ಭದಲ್ಲಿ ನಿರ್ದೇಶಕ ಗುರುನಾಥ್ ಜ್ಯಾಂತಿಕರ್, ಜಿಲ್ಲಾಧ್ಯಕ್ಷ ಚನ್ನಮಲ್ಲಯಿ, ಸೂರ್ಯಕಾಂತ್, ಸಂಜಯ್ ಕ್ಯಾಸೆ ಹಾಗೂ ಮಾರುತಿ ವಾಡೇಕರ್ ಇದ್ದರು.







