ಬೀದರ್ | ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಭಾರ ಜಿಲ್ಲಾ ಕಲ್ಯಾಣಾಧಿಕಾರಿಯನ್ನು ಅಮಾನತುಗೊಳಿಸಲು ಮನವಿ

ಬೀದರ್ : ಭ್ರಷ್ಟಾಚಾರದಲ್ಲಿ ತೊಡಗಿರುವ ಬೀದರ್ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಭಾರ ಜಿಲ್ಲಾ ಕಲ್ಯಾಣಾಧಿಕಾರಿ ಸಂಗೀತಾ ಎಸ್. ಬಿರಾದಾರ್ ಅವರನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ಆರೋಪಿಸಿ ಕರ್ನಾಟಕ ಪ್ರಜಾ ಶಕ್ತಿ ಸಮಿತಿಯು ಮನವಿ ಸಲ್ಲಿಸಿದೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ವಸತಿ ನಿಲಯಗಳಿಗೆ ಆಹಾರ ಧಾನ್ಯ ವಿತರಣೆ ಮಾಡಲು ಬೆಂಗಳೂರು ಮೂಲದ ಮಂಜುನಾಥ್ ಎಂಬ ವ್ಯಕ್ತಿಗೆ ಟೆಂಡರ್ ಆಗಿದೆ. ಆದರೆ ಸ್ಥಳೀಯರಾದ ಗೀರಿಶ್ ಎಂಬ ವ್ಯಕ್ತಿ ಆಹಾರ ಧಾನ್ಯ ವಿತರಣೆ ಮಾಡುತ್ತಿದ್ದಾರೆ. ಇದಕ್ಕೆ ಸಂಗೀತಾ ಎಸ್.ಬಿರಾದಾರ್ ಅವರು ಕುಮ್ಮಕ್ಕು ನೀಡುತ್ತಿದ್ದಾರೆ. ಗುಣಮಟ್ಟದ ಆಹಾರ ಧಾನ್ಯ ಸರಬಾರಾಜು ಮಾಡುತ್ತಿಲ್ಲ. ಮಂಜುನಾಥ್ ಮತ್ತು ಗೀರಿಶ್ ಅವರ ಸೂಸೈಡಿ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಲಾಗಿದೆ.
2024-25 ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸದೆ ನಕಲಿ ಬಿಲ್ಲು ಸೃಷ್ಟಿಸಿದ್ದಾರೆ. ಹಾಗೆಯೇ ಜಿಲ್ಲೆಯ ಎಲ್ಲಾ ಮೆಟ್ರಿಕ್ ಪೂರ್ವ ಬಾಲಕ ವಿದ್ಯಾರ್ಥಿಗಳಿಗೆ ಕ್ಷೌರ ಮಾಡದೇ ಬೋಗಸ್ ಬಿಲ್ಲು ಮಾಡಿದ್ದಾರೆ. ಬಯೋಮೇಟ್ರಿಕ ಹಾಜರಾತಿ ಆಧಾರದಲ್ಲಿ ವಸತಿ ನಿಲಯದ ಆಹಾರ ವೆಚ್ಚದ ಬಿಲ್ಲು ಪಾವತಿಸುವ ಬಗ್ಗೆ ಸರ್ಕಾರದ ಆದೇಶವಿದ್ದರೂ, ಅದನ್ನು ಗಾಳಿಗೆ ತೂರಿ ಮ್ಯಾನ್ಯುವಲ್ ಹಾಜರಾತಿ ಮಾಡುತ್ತಿರುವುದು ಕಂಡು ಬಂದಿದೆ. ಬಯೋ ಮೆಟ್ರಿಕ್ ಹಾಜರಾತಿ ಹಾಕಿದ ವಿದ್ಯಾರ್ಥಿಗಳಷ್ಟೇ ವಸತಿ ನಿಲಯದಲ್ಲಿ ಹಾಜರಿರುತ್ತಾರೆ. ಆದರೆ ನಿಲಯ ಪಾಲಕರು ಶೇ.100 ರಷ್ಟು ಮ್ಯಾನ್ಯುವಲ್ ಹಾಜರಾತಿ ಹಾಕಿ ಲೂಟಿ ಹೊಡೆಯುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಇವರನ್ನು ಕೂಡಲೇ ಅಮಾನತು ಮಾಡಿ ಇವರ ಮೇಲೆ ಕ್ರೀಮಿನಲ್ ಮೊಕದ್ದಮೆ ಹೂಡಿ 15 ದಿನದೊಳಗಾಗಿ ಸೇವೆಯಿಂದ ಅಮಾನತುಗೊಳಿಸಬೇಕು. ಇಲ್ಲದಿದ್ದರೆ ಜು.29 ರಂದು ಜಿಲ್ಲಾ ಪಂಚಾಯತ್ ಕಚೇರಿ ಎದುರಿಗೆ ಸಾಂಕೇತಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಜಾ ಶಕ್ತಿ ಸಮಿತಿಯ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಸಾಯಿ ಶಿಂಧೆ, ಉಪಾಧ್ಯಕ್ಷ ಮಹೇಂದ್ರಕುಮಾರ್ ಹೊಸಮನಿ, ವಿನೋದ್ ಶಿಂಧೆ, ವಿಶಾಲ್ ದೊಡ್ಡಿ ಹಾಗೂ ಆಕಾಶ್ ತ್ರಿಮುಖೆ ಇದ್ದರು.







