ಬೀದರ್ | ಪ್ರತಿಷ್ಠಿತ ಶಾಲೆಗೆ ಆಯ್ಕೆಯಾದ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಲೋಪ : ತನಿಖೆಗೆ ಪವನಗೊಂಡ ಒತ್ತಾಯ

ಬೀದರ್ : 2025-26 ನೇ ಸಾಲಿನಲ್ಲಿ ಪ್ರತಿಷ್ಠಿತ ಶಾಲೆಗಳಿಗೆ ಪರಿಶಿಷ್ಟ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ದಾಖಲಿಸುವ ಕಾರ್ಯಕ್ರಮದಡಿ ಅರ್ಹತಾ ಪರೀಕ್ಷೆ ಮೂಲಕ ಆಯ್ಕೆಗೊಂಡ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದು, ಸೂಕ್ತ ತನಿಖೆ ನಡೆಸಿ ಅಕ್ರಮ ಎಸಗಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾ ಉಪಾಧ್ಯಕ್ಷ ಪವನಗೊಂಡ ಒತ್ತಾಯಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಈ ವರ್ಷ ಪರಿಶಿಷ್ಟ ವರ್ಗಗಳ ಪ್ರತಿಭಾವಂತ 5ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ 10ನೇ ತರಗತಿ ವರೆಗೆ ಪ್ರತಿಷ್ಠಿತ ಶಾಲೆಗಳಲ್ಲಿ ಶಿಕ್ಷಣ ನೀಡುವುದಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಒಟ್ಟು 35 ವಿದ್ಯಾರ್ಥಿಗಳಿಗೆ ಆಯ್ಕೆ ಮಾಡಲಾಗುತ್ತದೆ. ಆದರೆ ಆಯ್ಕೆ ಪಟ್ಟಿಯಲ್ಲಿ ಲೋಪದೋಷ ಕಂಡುಬಂದಿದ್ದು, ಅಕ್ರಮ ನಡೆದಿರುವ ಶಂಕೆ ಇದೆ ಎಂದು ಅವರು ಆರೋಪಿಸಿದರು.
ಪರೀಕ್ಷೆಯ ನಂತರ ಜೂ.10 ರಂದು ಆಯ್ಕೆ ಪಟ್ಟಿಯ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಜೂ.18 ರಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಎಲ್ಲ ಪೋಷಕರಿಗೆ ಕರೆ ಮಾಡುವ ಮೂಲಕ ನಿಮ್ಮ ಮಕ್ಕಳು ಪರೀಕ್ಷೆಯಲ್ಲಿ ಉತ್ತಿರ್ಣರಾಗಿದ್ದು, ದಾಖಲೆಗಳ ಪರಿಶೀಲನೆ ಮಾಡುವುದಕ್ಕಾಗಿ ದಾಖಲೆಗಳ ಸಹಿತ ನಿಮ್ಮ ಮಕ್ಕಳನ್ನು ಕರೆದುಕೊಂಡು ಬರಬೇಕು ಎಂದು ತಿಳಿಸಿದ್ದಾರೆ. ಜೂ. 19 ರಂದು ಎಲ್ಲ ಪೋಷಕರು ದಾಖಲೆಗಳೊಂದಿಗೆ ಇಲಾಖೆಗೆ ತೆರಳಿ ದಾಖಲೆಗಳ ಪರಿಶೀಲನೆ ಮಾಡಿಕೊಂಡಿದ್ದಾರೆ. ನಂತರ ನಿಮ್ಮ ಮಕ್ಕಳನ್ನು ಚನ್ನಬಸವೇಶ್ವರ ಗುರುಕುಲ ವಸತಿ ಸಹಿತ ಶಾಲೆಯಲ್ಲಿ ಪ್ರವೇಶ ಪಡೆಯಲು ತಿಳಿಸಿದ್ದಾರೆ. ಪೋಷಕರು ಚನ್ನಬಸವೇಶ್ವರ ಗುರುಕುಲ ವಸತಿ ಸಹಿತ ಶಾಲೆಯಲ್ಲಿ ಪ್ರವೇಶ ಕೂಡ ಪಡೆದಿರುತ್ತಾರೆ. ಆದರೆ ಈಗ ಅದರಲ್ಲಿನ ಸುಮಾರು 19 ವಿದ್ಯಾರ್ಥಿಗಳ ಹೆಸರು ಆಯ್ಕೆ ಪಟ್ಟಿಯಿಂದ ಕೈ ಬಿಟ್ಟು ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಬಳಿರಾಮ್ ಅವರು ಬೇರೆ ವಿದ್ಯಾರ್ಥಿ ಪೋಷಕರಿಂದ ಹಣ ಪಡೆದುಕೊಂಡು ಆಯ್ಕೆ ಪಟ್ಟಿಯಲ್ಲಿ ಸೇರಿಸಿದ್ದು, ಎದ್ದು ಕಾಣುತ್ತಿದೆ. ಹಾಗಾಗಿ ತಕ್ಷಣವೇ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಬಳಿರಾಮ್ ಹಾಗೂ ಡಯಟ್ ಕಾಲೇಜಿನ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಪ್ರದೀಪ್ ಬೇಂದ್ರೆ, ಪೋಷಕರಾದ ಕನಕದಾಸ, ಸುಧಾಕರ್, ಬಸವರಾಜ್, ಸುವರ್ಣಾ, ರವಿ, ಕಲಾವತಿ ಹಾಗೂ ಪ್ರೀತಿ ಉಪಸ್ಥಿತರಿದ್ದರು.







