ಬೀದರ್ | ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ನೋಂದಣಿ ಪ್ರಕ್ರಿಯೆ ಅಚ್ಚುಕಟ್ಟಾಗಿ ನಡೆಯಲಿ : ಸಿಇಒ ಡಾ.ಗಿರೀಶ್ ಬದೋಲೆ

ಬೀದರ್ : ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ನೋಂದಣಿ ಪ್ರಕ್ರಿಯೆ ಅಚ್ಚುಕಟ್ಟಾಗಿ ನಡೆಯಲಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಗಿರೀಶ್ ಬದೋಲೆ ಅವರು ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ನಡೆದ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಸ್ವಿಪ್ ಮತ್ತು ಜಿಲ್ಲಾ ಮಟ್ಟದ ಮೇಲ್ವಿಚಾರಣಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣಾ ಮತದಾರರ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ನಿರೀಕ್ಷಿತ ಮಟ್ಟದಲ್ಲಿ ನೋಂದಣಿಗೆ ಕ್ರಮ ವಹಿಸಬೇಕು. ಇದಕ್ಕಾಗಿ ಎಲ್ಲಾ ಅಧಿಕಾರಿಗಳು, ನೋಡಲ್ ಅಧಿಕಾರಿಗಳು, ಪ್ರೌಢಶಾಲೆ, ವಿಶ್ವವಿದ್ಯಾಲಯ, ವೈದ್ಯಕೀಯ ಕಾಲೇಜು, ಪದವಿಪೂರ್ವ, ಪದವಿ ಕಾಲೇಜುಗಳಲ್ಲಿ ವ್ಯಾಪಕ ಪ್ರಚಾರ ನಡೆಸಿ ನೋಂದಣಿ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅರ್ಹ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಿ ಅಲ್ಲಿ ನೋಂದಣಿಗಾಗಿ ಅರ್ಹರಿರುವ ಮತದಾರರನ್ನು ಕಚೇರಿ ಮುಖ್ಯಸ್ಥರ ಮುಖಾಂತರ ಸಂಪರ್ಕಿಸಿ, ನಿಗದಿಪಡಿಸಿದ ಸಮಯದೊಳಗೆ ನಿಯಮಾನುಸಾರ ನಮೂನೆ-19ರ ಅರ್ಜಿಯೊಂದಿಗೆ ಪೂರಕ ದಾಖಲೆಗಳನ್ನು ಸ್ವೀಕರಿಸುವಂತೆ ಅವರು ಸೂಚಿಸಿದರು.
ಮತದಾರರ ನೋಂದಣಿ ನಿಗದಿತ ಗುರಿಯಂತೆ ನಡೆಯುತ್ತಿಲ್ಲ. ಆದ್ದರಿಂದ ವಿಶೇಷ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಮತದಾರರ ನೋಂದಣಿಗೆ ನ.6ರ ವರೆಗೆ ಕಾಲಾವಕಾಶ ಇದೆ ಎಂದು ಕಾಯಬೇಕಾಗಿಲ್ಲ. ಅ.30ರ ಒಳಗಾಗಿ ಅರ್ಹಮತದಾರರಲ್ಲಿ ಶೇ.90 ರಷ್ಟು ಮತದಾರರ ನೋಂದಣಿ ಆಗಿರಬೇಕು ಎಂದು ಅವರು ತಿಳಿಸಿದರು.
ಅ.27 ರ ಸೋಮವಾರದಂದು 'ಮಿಂಚಣಿ ನೊಂದಣಿ ಅಭಿಯಾನ' ಆಯೋಜಿಸಿದ್ದು ಆ ದಿನ ಕಡ್ಡಾಯವಾಗಿ ಎಲ್ಲಾ ಶಿಕ್ಷಣ ಸಂಸ್ಥೆಗಳ ಅರ್ಹಮತದಾರ ಶಿಕ್ಷಕರು ನಮೂನೆ 19ನ್ನು ಭರ್ತಿ ಮಾಡಿ ತಹಶೀಲ್ದಾರ್ ಕಚೇರಿಗೆ ಸಲ್ಲಿಸಬೇಕು. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆಯಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಜವಾಬ್ದಾರರಾಗಿರುತ್ತಾರೆ ಎಂದರು.
ಈ ಸಭೆಯಲ್ಲಿ ಬೀದರ್ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್, ಜಿಲ್ಲಾ ಸ್ವೀಪ್ ಅಧಿಕಾರಿ ಡಾ.ಗೌತಮ್ ಅರಳಿ, ಬೀದರ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪರಮೇಶ್ ನಾಯಕ್, ಬೀದರ್ ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಎಂ.ಕೆ ತಾಂದಲೆ ಸೇರಿದಂತೆ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.







