ಬೀದರ್ | ವಿದೇಶದಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿದ ಏಕೈಕ ವ್ಯಕ್ತಿ ಡಾ.ಅಬ್ದುಲ್ ಖದೀರ್ : ನಾಡೋಜ ಡಾ.ಬಸವಲಿಂಗ ಪಟ್ಟದೇವರು

ಬೀದರ್: ಭಾರತ ದೇಶ ಅಷ್ಟೇ ಅಲ್ಲದೆ ವಿದೇಶದಲ್ಲಿಯೂ ಸಹ ಶಿಕ್ಷಣ ಸಂಸ್ಥೆಯನ್ನು ಕಟ್ಟಿ, ಅದನ್ನ ಬೆಳೆಸುವಂತಹ ಶಕ್ತಿ ಇರುವ ಉತ್ತರ ಕರ್ನಾಟಕ ಭಾಗದ ಏಕೈಕ ವ್ಯಕ್ತಿ ಎಂದರೆ ಅದು ಡಾ.ಅಬ್ದುಲ್ ಖದೀರ್ ಅವರು ಮಾತ್ರ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ ಪಟ್ಟದೇವರು ತಿಳಿಸಿದರು.
ಇಂದು ನಗರದ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ನಡೆದ ಶಾಹೀನ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ.ಅಬ್ದುಲ್ ಖದೀರ್ ಅವರಿಗೆ ಅಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯದಿಂದ ಪ್ರತಿಷ್ಠಿತ ರಾಷ್ಟ್ರೀಯ ಶ್ರೇಷ್ಠ ಪ್ರಶಸ್ತಿ ಬಂದ ಹಿನ್ನೆಲೆ ಅಭಿನಂದನಾ ಸಮಾರಂಭ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಅಬ್ದುಲ್ ಖದೀರ್ ಅವರ ನೇತೃತ್ವದಲ್ಲಿ ಶಾಹೀನ್ ಸಂಸ್ಥೆಯು ಬಸವಣ್ಣನ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಬಡವರಿಗೆ, ಹಿಂದುಳಿದವರಿಗೆ, ಶೋಷಿತ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದು ನುಡಿದರು.
ಖದೀರ್ ಅವರು ಹಿಂದೂ ಮುಸ್ಲಿಂ ಸಮುದಾಯಗಳ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಿದ್ದಾರೆ. ಗುಟ್ಕಾ, ಸಿಗರೇಟ್ ಸೇರಿದಂತೆ ಮಾದಕ ವಸ್ತುಗಳು ನಿಷೇಧವಾಗಬೇಕು. ಆಡಂಬರದ ಮದುವೆ ಹಾಗೂ ಕಾರ್ಯಕ್ರಮಗಳು ನಿಲ್ಲಬೇಕು ಎಂಬ ನಿಟ್ಟಿನಲ್ಲಿ ಅವರು ಮಾಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ. ಅವರ ಈ ಕಾರ್ಯದಲ್ಲಿ ನಾವು ಸಹ ಕೈ ಜೋಡಿಸೋಣ. ಖದೀರ್ ಅವರ ಸೇವಾ ಕಾರ್ಯ ಹೀಗೆ ಮುಂದುವರೆಯಲಿ, ಇನ್ನು ಉನ್ನತ ಮಟ್ಟದ ಪ್ರಶಸ್ತಿಗಳು ಅವರಿಗೆ ದೊರಕಲಿ ಎಂದು ಆಶಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರು ಮಾತನಾಡಿ, ಕೇವಲ 17 ವಿದ್ಯಾರ್ಥಿಗಳಿಂದ 1989ರಲ್ಲಿ ಪ್ರಾರಂಭವಾದ ಶಾಹೀನ್ ಶಿಕ್ಷಣ ಸಂಸ್ಥೆ ಇವತ್ತು ದೇಶದಲ್ಲೆಡೆ 140ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳಲ್ಲಿ 45 ಸಾವಿರ ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಇದು ಇಡೀ ಬೀದರ್ ಜಿಲ್ಲೆ ಹೆಮ್ಮೆಪಡುವ ವಿಚಾರವಾಗಿದೆ. ಈ ಹಿಂದೆ ಎಸೆಸೆಲ್ಸಿ ಮತ್ತು ಪಿಯುಸಿ ಫಲಿತಾಂಶ ಪ್ರಕಟವಾದ ಸಮಯದಲ್ಲಿ ನಮ್ಮ ಬೀದರ್ ಜಿಲ್ಲೆ 30, 32ನೇ ಸ್ಥಾನದಲ್ಲಿರುವುದನ್ನು ನಾವು ನೋಡುತ್ತಿದ್ದೆವು. ಆದರೆ ಇವತ್ತು ನೀಟ್ ಫಲಿತಾಂಶದಲ್ಲಿ ಬೀದರ್ ಜಿಲ್ಲೆ ಮೂರನೇ ಸ್ಥಾನ ಪಡೆದಿದೆ ಎಂದು ಹೇಳಲು ನಿಜಕ್ಕೂ ಖುಷಿಯಾಗುತ್ತಿದೆ ಎಂದರು.
ಹಣವಂತರ ಮಕ್ಕಳಿಗೆ ಮಾತ್ರ ಮೆಡಿಕಲ್ ಸೀಟ್ ದೊರೆಯುತ್ತದೆ ಎಂಬ ಕಾಲಘಟ್ಟದಲ್ಲಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಮಕ್ಕಳಿಗೂ ಉಚಿತವಾಗಿ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಬಡವರ ಮಕ್ಕಳಿಗೂ ಎಂಬಿಬಿಎಸ್ ಸೀಟ್ ದೊರೆಯುವಂತೆ ಮಾಡಿದ ಅಬ್ದುಲ್ ಖದೀರ್ ಅವರ ಕಾರ್ಯ ಇಡೀ ಸಮಾಜಕ್ಕೆ ಆದರ್ಶವಾಗಿದೆ ಎಂದು ಶ್ಲಾಘೀಸಿದರು.
ಅಭಿನಂದನೆ ಸ್ವೀಕರಿಸಿ ಡಾ.ಅಬ್ದುಲ್ ಖದೀರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಅಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯದಿಂದ ಪ್ರಶಸ್ತಿ ಬಂದ ಹಿನ್ನೆಲೆ ಬೀದರ್ ಮಹಾನಗರದ ಜನತೆ ಇಂದು ನನ್ನನ್ನು ಸನ್ಮಾನಿಸಿ ಅಭಿನಂದಿಸಿದ್ದಾರೆ. ಅಲಿಘಡ್ ವಿಶ್ವವಿದ್ಯಾಲಯ ನೀಡಿರುವ ಈ ಪ್ರಶಸ್ತಿ ಇದು ಕೇವಲ ನನಗೆ ದೊರೆತದ್ದಲ್ಲ. ಬೀದರ್ ಜಿಲ್ಲೆಯ ಜನತೆಗೆ ಹಾಗೂ ಇಡೀ ಶಾಹೀನ್ ಸಂಸ್ಥೆಗೆ ದೊರೆತದ್ದು. ಬೀದರ್ ಜನತೆಯ ಸಹಕಾರದೊಂದಿಗೆ ಜಿಲ್ಲೆಯ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯೋಣ. ಜಿಲ್ಲೆಯ ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಕೆಲಸ ಮಾಡೋಣ ಎಂದು ನುಡಿದರು.
ಈ ಸಂದರ್ಭದಲ್ಲಿ ಬಸವ ಯೋಗಾಶ್ರಮದ ಡಾ.ಸಿದ್ದರಾಮ ಬೆಲ್ದಾಳ ಶರಣರು, ಬಸವ ಸೇವಾ ಪ್ರತಿಷ್ಠಾನದ ಡಾ.ಗಂಗಾಂಬಿಕ ಅಕ್ಕ, ಆಣದೂರಿನ ಜ್ಞಾನಸಾಗರ್ ಭಂತೆಜಿ, ಸೇಂಟ್ ಜೋಸೆಫ್ ಶಿಕ್ಷಣ ಸಂಸ್ಥೆಯ ಫಾದರ್ ವಿಲ್ಸನ್, ಶಾಸಕ ಶೈಲೇಂದ್ರ ಬೆಲ್ದಾಳೆ, ಅಭಿನಂದನಾ ಸಮಿತಿಯ ಅಧ್ಯಕ್ಷ ಬಸವರಾಜ್ ಜಾಬಶೆಟ್ಟಿ, ಪ್ರೊ.ಸಿದ್ದರಾಮಪ್ಪ ಮಾಸಿಮಾಡೆ, ಡಾ. ಬಲಬೀರ್ ಸಿಂಗ್, ಡಾ.ರಜನೀಶ್ ವಾಲಿ, ಸೋಮಶೇಖರ್ ಬಿರಾದರ್ ಚಿದ್ರಿ, ಅಭಿನಂದನ ಸಮಿತಿಯ ಕಾರ್ಯದರ್ಶಿ ಸುರೇಶ್ ಚನ್ನಶೆಟ್ಟಿ ಹಾಗೂ ಕೋಶಾಧ್ಯಕ್ಷ ಶಿವಶಂಕರ್ ಟೋಕರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







