Bidar | ಶಾಲಾ ಕಟ್ಟಡದ ಮೇಲಿಂದ ಬಿದ್ದು ವಿದ್ಯಾರ್ಥಿ ಮೃತ್ಯು

ಸಮೀರ್(15)
ಬೀದರ್ : ನಗರದ ಎಲ್ಐಸಿ ಕಾಲನಿಯಲ್ಲಿರುವ ಖಾಸಗಿ ಶಾಲೆಯ ಕಟ್ಟಡದ ಮೇಲಿಂದ ಬಿದ್ದು ಎಸೆಸೆಲ್ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ ನಡೆದಿದ್ದು, ಶಾಲಾ ಸಿಬ್ಬಂದಿಗಳ ಕಿರುಕುಳವೇ ಆತನ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಬೀದರ್ನ ಶಾಂತಿನಗರದ ನಿವಾಸಿ ಸಮೀರ್(15) ಮೃತ ವಿದ್ಯಾರ್ಥಿಯಾಗಿದ್ದಾನೆ. ಸಮೀರ್ ಖಾಸಗಿ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಆ ಶಾಲೆಯ ನಾಲ್ಕನೇ ಅಂತಸ್ತಿನಿಂದ ಬಿದ್ದು ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ʼಸಮೀರ್ ನಿಗೆ ಪ್ರತಿನಿತ್ಯ ಶಾಲಾ ಸಿಬ್ಬಂದಿಗಳು ಕಿರುಕುಳ ನೀಡುತ್ತಿದ್ದರು. ಶಾಲಾ ಸಿಬ್ಬಂದಿಗಳು ಕಿರಕುಳ ನೀಡುತ್ತಿರುವುದು ಸಮೀರ್ ಮನೆಯಲ್ಲಿ ಕೂಡ ಹೇಳಿದ್ದನು. ಕಿರಕುಳ ನೀಡದಂತೆ ಶಾಲಾ ಸಿಬ್ಬಂದಿಗಳಿಗೆ ಹೇಳಲಾಗಿತ್ತು. ಆದರೂ ಕೂಡ ಶಾಲಾ ಸಿಬ್ಬಂದಿಗಳು ಕಿರಕುಳ ನೀಡಿದ್ದರಿಂದ ಆತ ಮೃತಪಟ್ಟಿದ್ದಾನೆʼ ಎಂದು ಸಮೀರ್ ನ ಸಂಬಂಧಿಕರು ಆರೋಪಿಸಿದ್ದಾರೆ.
ʼಎಂದಿನಂತೆ ಸಮೀರ್ ಇವತ್ತು ಕೂಡ ಬೆಳಿಗ್ಗೆ ಶಾಲೆಗೆ ಹೋಗಿದ್ದನು. ಆದರೆ ಶಾಲಾ ಕಟ್ಟಡದ ಮೇಲಿಂದ ಬಿದ್ದು ಮೃತಪಟ್ಟಿದ್ದಾನೆ. ಶವ ಪರೀಕ್ಷೆಗಾಗಿ ಮೃತದೇಹವನ್ನು ಬ್ರಿಮ್ಸ್ ಆಸ್ಪತ್ರೆಗೆ ತರಲಾಗಿದ್ದು, ನಮಗೆ ಮಾಹಿತಿ ನೀಡದೇ, ನಮ್ಮ ಅನುಮತಿ ಕೇಳದೇ ಶವ ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದಾರೆʼ ಎಂದು ಮೃತ ವಿದ್ಯಾರ್ಥಿಯ ಸಂಬಂಧಿಕರು ದೂರಿದ್ದು, ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.






